‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ 6ರಂದು ತೆರೆಗೆ

Venkateshwara Rao Director
??????????
Published on

ಬಳ್ಳಾರಿ: ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಕನ್ನಡ ಚಲನಚಿತ್ರ ಜ.6ರಂದು ರಾಜ್ಯಾದ್ಯಂತ 100 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ಮಾಪಕ ವೆಂಕಟೇಶ್ವರ್‌ರಾವ್ ಹೇಳಿದರು. ಉತ್ತರ ಕನ್ನಡದ ಹಳ್ಳಿಯೊಂದರ ಕಥೆ ಇದಾಗಿದ್ದು, ಛಾಯಾಚಿತ್ರಗ್ರಾಹಕನ ಜೀವನದಲ್ಲಿ ನಡೆಯಲಿರುವ ಘಟನೆಗಳ ಕುರಿತು ಸಿನಿಮಾ ನಿರ್ಮಿಸಲಾಗಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ರಾಜೇಶ್ ಧ್ರುವ ಕಿರುತೆರೆ ನಟರಾಗಿ ಹೆಸರು ಮಾಡಿದ್ದರು. ಈಗ ಹಿರಿತೆರೆಗೆ ಬಡ್ತಿ ಪಡೆದಿದಿದ್ದು, ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದಾರೆ ಎಂದರು.

ಇತ್ತಿಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಚಿತ್ರದ ಕಡೆ ಮುಖ ಮಾಡಿದೆ. ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿಯಾಗಿವೆ. ಈಗ ಉತ್ತರ ಕನ್ನಡದ ಹಳ್ಳಿಯೊಂದರ ಕಥೆಯನ್ನು ರಾಜೇಶ್ ಹೇಳುತ್ತಿದ್ದಾರೆ. ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಬಳಸಿರುವ ಭಾಷೆ ಕೂಡ ಉತ್ತರಕನ್ನಡ ಭಾಗದ್ದು, ಶೇ.80 ಚಿತ್ರೀಕರಣ ಮಳೆ, ಹಸಿರುಮಯವಾದ ರಮಣೀಯ ಸ್ಥಳಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷತೆ ಎಂದರು.

ರಾಧಿಕಾ ಅಚ್ಯುತ್‌ರಾವ್ ನಾಯಕಿಯಾಗಿ ನಟಿಸಿದ್ದಾರೆ. ರವಿ ಸಾಲಿಯಾನ್, ಸಂಪತ್ ಜೆ. ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರಾವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ರವಿ ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಮತ್ತಿತರರು ನಟಿಸಿದ್ದಾರೆ ಎಂದರು.

ಕಥೆ-ಚಿತ್ರಕಥೆ ಅಭಿಷೇಕ್ ಶಿರಸಿ, ಪೃಥ್ವಿಕಾಂತ ಅವರದ್ದಾಗಿದೆ. ಸಂಭಾಷಣೆಯನ್ನು ಅಜಿತ್ ಬೊಪ್ಪನಳ್ಳಿ ಬರೆದಿದ್ದಾರೆ. ಶ್ರೀರಾಮ್ ಗಂಧರ್ವ ಅವರ ಸಂಗೀತ, ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಅವರ ಸಾಹಿತ್ಯ ಚಿತ್ರಕ್ಕಿದೆ. ವೆಂಕಟೇಶ್ವರ್‌ರಾವ್ ನಿರ್ಮಾಪಕರಾಗಿದ್ದು, ಸಹ ನಿರ್ಮಾಪಕರಾಗಿ ಬಿ.ವೀರನಗೌಡ ಹಾಗೂ ಕೆ.ಎಸ್.ರಾವ್ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದಾರೆ ಎಂದರು. ಕರವೇ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಗಣಪತಿ ಭಟ್, ನಟ ಹಾಗೂ ನಿರ್ದೇಶಕ ರಾಜೇಶ್ ಧ್ರುವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net