ಬಳ್ಳಾರಿ ; ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರಿಗೆ ಹೆಚ್ಚಿನ ಬಲ ತುಂಬಿ ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ನಿಗಮ ಜಿಲ್ಲಾ ವಿಭಾಗ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಶಕ್ತಿ ಯೋಜನೆಯ 500 ಕೋಟಿ ಮಹಿಳೆಯರ ಪ್ರಯಾಣದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ಯಾರೆಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಅಡಿಯಲ್ಲಿ ಈವರೆಗೆ 500 ಕೋಟಿ ಮಹಿಳೆಯರು ಪ್ರಯಾಣಿಸಿರುವುದು ಸಂಭ್ರಮದ ವಿಷಯವಾಗಿದ್ದು, ಮಹಿಳೆಯರಿಗೆ ಉತ್ತೇಜನ ನೀಡಿದೆ. ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಜಾರಿಯಾಗಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೇರೆ-ಬೇರೆ ರಾಜ್ಯಗಳಿಗೂ ಕೂಡ ಮಾದರಿಯಾಗಿದೆ ಎಂದು ಹೇಳಿದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಸರ್ಕಾರವು ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಮಧ್ಯಮ ವರ್ಗದ ಮಹಿಳೆಯರು ತನ್ನ ಕುಟುಂಬದ ಪೋಷಣೆಗಾಗಿ ಸಣ್ಣ ವ್ಯಾಪಾರ-ವಹಿವಾಟುಗಳಿಗೆ ನಗರಕ್ಕೆ ಮುಖಮಾಡಿ ಬರುವಾಗ ಅವಳ ಪ್ರಯಾಣದ ಖರ್ಚಿಗೆ ಸಹಕಾರಿಯಾಗಿ, ತಮ್ಮ ವ್ಯಾಪಾರ ವಹಿವಾಟು ನಡೆಸಲು ಅದರ ಭಾರವನ್ನು ಹೊರೆಯಾಗದಂತೆ ನಿರ್ವಹಿಸಲು ಈ ಯೋಜನೆಯು ಅನುಕೂಲವಾಗಿದೆ. ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಶಕ್ತಿ ಯೋಜನೆ ದಿಟ್ಟ ಹೆಜ್ಜೆ ಎಂದೇ ಬಿಂಬಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಹಿಳೆಯರಿಗೆ ಸಿಹಿ ಮತ್ತು ಸ್ಫೂರ್ತಿಧಾಯಕ ಮಹಿಳೆಯರ ಪುಸ್ತಕಗಳನ್ನು ವಿತರಿಸಿದರು.