ಜಿಲ್ಲಾದ್ಯಂತ ಏಳು ಖರೀದಿ ಕೇಂದ್ರ ಆರಂಭ

Published on

ಬಳ್ಳಾರಿ : ಪ್ರಸ್ತಕ ಸಾಲಿನಲ್ಲಿ ಭತ್ತ, ರಾಗಿ, ಜೋಳ ಖರೀದಿಸಲು ಜಿಲ್ಲಾದ್ಯಂತ ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಡಿಸಿ ಪ್ರಶಾಂತಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ನೂತನ ಡಿಸಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಕೇವಲ ರಾಗಿ, ಜೋಳ ಬೆಳೆಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ನೋಂದಣಿ ಹಾಗೂ ಖರೀದಿ ಮಾಡಲಾಗುತ್ತಿತ್ತು, ಪ್ರಸ್ತುತ ಜಿಲ್ಲೆಯಲ್ಲಿನ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭತ್ತವನ್ನೂ ಸಹ ನೋಂದಣಿ ಮತ್ತು ಖರೀದಿ ಮಾಡಲಾಗುತ್ತಿದೆ ಎಂದರು.

ಖರೀದಿ ಕೇಂದ್ರಗಳು ಎಲ್ಲೆಲ್ಲಿ : ತಾಲೂಕಿನ ಎಪಿಎಂಸಿ ಯಾರ್ಡ್, ಕುರುಗೋಡು ತಾಲೂಕಿನ (ಎಪಿಎಂಸಿ ಯಾರ್ಡ್), ಕಂಪ್ಲಿ (ಎಪಿಎಂಸಿ ಯಾರ್ಡ್), ಸಂಡೂರು (ಎಪಿಎಂಸಿ ಯಾರ್ಡ್), ಸಿರುಗುಪ್ಪ (ಎಪಿಎಂಸಿ ಯಾರ್ಡ್), ಹಚ್ಚೊಳ್ಳಿಯ ಎಪಿಎಂಸಿ ಯಾರ್ಡ್, ಕರೂರಿನ ಎಪಿಎಂಸಿ ಯಾರ್ಡ ಸ್ಥಳಗಳಲ್ಲಿ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗುತ್ತದೆ. ಕಳೆದ ಬಾರಿ ಐದು ಖರೀದಿ ಕೇಂದ್ರಗಳಲ್ಲಿ ಬೆಳೆ ಖರೀದಿ ಮಾಡಲಾಗುತ್ತಿತ್ತು, ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಬಲ ಬೆಲೆ: ಸಾಮಾನ್ಯ ಭತ್ತಕ್ಕೆ 2,300 ರೂ. ಮತ್ತು ಗ್ರೇಡ್ ಎ ಭತ್ತಕ್ಕೆ 2,320 ರೂ. ರಾಗಿಗೆ 4,290 ರೂ., ಹೈಬ್ರೀಡ್ ಬಿಳಿ ಜೋಳಕ್ಕೆ 3,371ರೂ., ಮಾಲ್ದಂಡಿ ಬಿಳಿ ಜೋಳಕ್ಕೆ 3,421 ರೂ. (ಪ್ರತಿ ಕ್ವಿಂಟಾಲ್‌ಗೆ) ಬೆಲೆ ನಿಗದಿ ಪಡಿಸಲಾಗಿದೆ. ಭತ್ತ ಬೆಳೆಯನ್ನು ನೊಂದಯಿಸಲು ನ.11 ರಿಂದ ಡಿ.31 ವರೆಗೆ ಅವಕಾಶವಿದ್ದು, ಭತ್ತ ಖರೀದಿ ಕೇಂದ್ರದಲ್ಲಿ 2025ರ ಜ.01 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ. ರಾಗಿ ಮತ್ತು ಜೋಳ ನೋಂದಣಿಯು ಡಿ.01 ರಿಂದ ಪ್ರಾರಂಭಗೊಳ್ಳುತ್ತದೆ. ಹಾಗೂ ರಾಗಿ ಮತ್ತು ಜೋಳ ಬೆಳೆಯ ಖರೀದಿ ಕೇಂದ್ರದಲ್ಲಿ 2025ರ ಜ.01 ರಿಂದ ಮಾ.31ರ ವರೆಗೆ ಖರೀದಿಸಲಾಗುತ್ತದೆ ಎಂದರು. ಖರೀದಿ ಕೇಂದ್ರಗಳಲ್ಲಿ ಚೆಕ್‌ಪೊಸ್ಟ್ ತೆರೆಯಲಾಗುತ್ತದೆ. ಬೆಳೆಗಳ ಖರೀದಿ ಹಾಗೂ ನೋಂದಣಿ ಪ್ರಕ್ರಿಯೆಯು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೆ ಬೆಳೆಗಳ ನೊಂದಣಿ ಹಾಗೂ ಖರೀದಿ ಕಾರ್ಯ ಯಶಸ್ವಿಯಾಗಿ ನಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net