ವೈದ್ಯ ಅಪಹರಣ ಪ್ರಕರಣ ಏಳು ಆರೋಪಿಗಳ ಬಂಧನ

Published on

ಬಳ್ಳಾರಿ : ನಗರದ ಜಿಲ್ಲಾಸ್ಪತ್ರೆ ಮಕ್ಕಳತಜ್ಞ ವೈದ್ಯ ಡಾ. ಸುನೀಲ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಪೈಕಿ ಒಬ್ಬನಿಗೆ ಗುಂಡೇಟು ಹೊಡೆಯಲಾಗಿದೆ ಎಂದು ಎಸ್ಪಿ ಡಾ.ವಿ.ಜೆ. ಶೋಭಾರಾಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಲ್ಲಿನ ಬಸವೇಶ್ವರ ನಗರದ ಎಸ್.ಶ್ರೀಕಾಂತ್, ಪಟೇಲ್‌ನಗರದ ವೈ.ಬೋಜರಾಜ, ಹರಿಪ್ರಿಯನಗರದ ಕೆ.ಪುರುಷೋತ್ತಮ್, ಎಸ್.ಎನ್.ಪೇಟೆಯ ಉಮೇಶ್‌ಯಾದವ್, ನಗರ ನಿವಾಸಿಗಳಾದ ಕೆ.ತರುಣ್‌ಕುಮಾರ, ಎಸ್.ಸಾಯಿ ಹಾಗೂ ವಿಜಯನಗರ ಜಿಲ್ಲೆಯ ಎಸ್.ರಾಕೇಶ್ ಬಂಧಿತರು. ಆರೋಪಿತರನ್ನು ತನಿಖೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ವೇಳೆ ಎ1 ಆರೋಪಿ ಎಸ್.ಶ್ರೀಕಾಂತ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಠಾಣಾ ಪೇದೆ ಕೋಸಗಿ ಕಾಳಿಂಗಪ್ಪ ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಸ್ವಯಂ ಆತ್ಮರಕ್ಷಣೆಗಾಗಿ ಸಿಪಿಐ ಎಂ.ಎನ್.ಸಿಂಧೂರ ಆರೋಪಿಗೆ ಕಾಲಿಗೆ ಗುಂಡೇಟು ಹೊಡೆದಿದ್ದಾರೆ ಎಂದರು. ಸದ್ಯ ಆರೋಪಿ ಹಾಗೂ ಹಲ್ಲೆಗೊಳಗಾದ ಪೊಲೀಸ್ ಪೇದೆಯನ್ನು ಟ್ರಾಮ್‌ಕೇರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 48 ಗಂಟೆಯಲ್ಲಿ ಆರೋಪಿತರನ್ನು ಪತ್ತೆ ಮಾಡಿದ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಲಾಗಿದೆ. ಇನ್ನೊಬ್ಬ ಆರೋಪಿಯಿದ್ದು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದರು. ಎಎಸ್ಪಿ ನವೀನ ಕುಮಾರ್, ಸಿಪಿಐ ಎಂ.ಎನ್. ಸಿಂಧೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net