ಬಳ್ಳಾರಿ : ರಾಜ್ಯ ಸರ್ಕಾರ ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ. 6ರಷ್ಟು ಮೀಸಲಾತಿ ನೀಡಿ ಶಿಫಾರಸ್ಸು ಹೊರಡಿಸಲಿ ಎಂದು ಕರ್ನಾಟಕ ಮಾದಿಗ ಮತ್ತು ಉಪಜಾತಿಗಳ ಸಂಘಟನೆಯ ಒಕ್ಕೂಟದ ರಾಜ್ಯ ಸಂಚಾಲಕ ಎಚ್.ಹನುಮಂತಪ್ಪ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಆ.16 ರಂದು ನಡೆಯುವ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು. ಇಲ್ಲದಿದ್ದರೆ, ರಾಜ್ಯದ ಸಮಸ್ತ ಮಾದಿಗ ಸಮುದಾಯವು ಆ. 18 ರಂದು ವಿಧಾನಸೌಧ ಹಾಗೂ ಸಿಎಂ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕಳೆದ ಎರಡು ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಆಶ್ವಾಸನೆ ನೀಡಿದೆ. ಆದರೆ, ಸದಾಶಿವ, ಮಾಧುಸ್ವಾಮಿ ಹಾಗೂ ನ್ಯಾ.ನಾಗಮೋಹನ್ ದಾಸ್ ವರದಿ ಸರ್ಕಾರದ ಕೈ ಸೇರಿದರೂ ಈವರೆಗೂ ಜಾರಿಗೊಳಿಸಲು ವಿಳಂಬ ತೋರುತ್ತಿದೆ ಎಂದು ಅಕ್ರೋಶ ಹೊರಹಾಕಿದರು.
ಸದಾ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ದಲಿತರ ಪರವಾಗಿ ಎಂಬುದಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಒಳ ಮೀಸಲಾತಿ ಜಾರಿಗೊಳಿಸುವುದರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕೆಲ ಸಚಿವರು ಒಳ ಮೀಸಲಾತಿಗೆ ಅಕ್ಷೇಪಣೆ ಸಲ್ಲಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈವರೆಗೆ, ಒಳ ಮೀಸಲಾತಿಗಾಗಿ ಶಾಂತಿಯುತವಾಗಿ ಹೋರಾಟ ನಡೆದಿದೆ. ಇನ್ನೂ ಮುಂದೆ ಸರ್ಕಾರದ ವಿರುದ್ಧ ದಂಗೆ ಏಳಲಾಗುವುದು ಎಂದರು.
ರಾಜ್ಯ ಸರ್ಕಾರ ಎಸ್‌ಸಿಪಿ ಹಾಗೂ ಟಿಎಸ್ಪಿ ಯೋಜನೆಯ 39 ಸಾವಿರ ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಮುಖಂಡರಾದ ಸಿ.ಹುಲುಗಪ್ಪ, ಎ.ಈಶ್ವರಪ್ಪ, ಸಿ.ಸೋಮಶೇಖರ್, ಸಿ.ರುದ್ರಪ್ಪ, ವಸಂತ ಕುಮಾರ್ ಇದ್ದರು.