ಸೀರಜ್ ಅಭಿಯಾನ ಆರಂಭ

Published on

ಬಳ್ಳಾರಿ : ಪೈಗಂಬರ್ ಮುಹಮ್ಮದ್(ಸ) ಶೀರ್ಷಿಕೆಯಡಿ ಸೆ.3 ರಿಂದ ಸೆ.14ರವರೆಗೆ ಸೀರಜ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಸೈಯ್ಯದ್ ನಿಜಾಮುದ್ದೀನ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಆದರ್ಶದ ಔಚಿತ್ಯ ಹಾಗೂ ಪ್ರವಾದಿ ಮುಹಮ್ಮದ್ ಅರಿಯಿರಿ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪೈಗಂಬರ್ ಮುಹಮ್ಮದ್ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು. ಜತೆಗೆ ಪೈಗಂಬರ್‌ರವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ನಾನಾ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸೀರತ್ ಅಭಿಯಾನದ ಹಿನ್ನೆಲೆ ಸಮುದಾಯದ ಪ್ರಮುಖ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳೊಂದಿಗೆ ಸಭೆ ನಡೆಸಲಾಗುವುದು. ತಾಲೂಕಿನ ಕೆ.ವೀರಾಪುರ ಹಾಗೂ ಜಾಲಿಬೆಂಚಿ ಗ್ರಾಮದಲ್ಲಿ ಪೈಗಂಬರ್ ಮುಹಮ್ಮದ್ ಜೀವನದ ಕುರಿತು ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಮತ್ತು ಶಿಕ್ಷಕರಿಗಾಗಿ ಪೈಗಂಬರ್ ಮುಹಮ್ಮದ್ ಜೀವನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಆಸ್ಪತ್ರೆ, ವೃದ್ಧಾಶ್ರಮ ಮತ್ತು ಅನಾಥಶ್ರಮಗಳಿಗೆ ಭೇಟಿ ನೀಡುವುದು. ಸೆ.28 ರಂದು ಸಂಜೆ 6.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗದಲ್ಲಿ ಸಮಾರೋಪ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಮುಖಂಡರಾದ ಸೈಯ್ಯದ್ ನಾಸೀರ್ ಅಲಿ, ಲತೀಫ್, ಸಿರಿಗೇರಿ ಪನ್ನರಾಜ್, ದುರ್ದಾನ, ಫರ್ವೀನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net