ಎಂಟು ಬೀಜದಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿದ ತೋಟಗಾರಿಕೆ, ಕೃಷಿ ಅಧಿಕಾರಿಗಳು

Ballari Seeds Shop Seize
ಬಳ್ಳಾರಿ ನಗರದ ಕೆ.ಸಿ ಮತ್ತು ವಡ್ಡರಬಂಡಿ ರಸ್ತೆಯಲ್ಲಿರುವ ಬೀಜದ ಅಂಗಡಿಗಳ ವಿರುದ್ಧ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಮಂಗಳವಾರ ದಾಳಿ ನಡೆಸಿ ಹಲವು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿದರು.
Published on

ಬಳ್ಳಾರಿ: ಇಲಾಖೆ ನಿಯಮ ಉಲ್ಲಂಘಿಸಿದ ನಗರದ ಎಂಟು ಬೀಜದ ಅಂಗಡಿಗಳ ವಿರುದ್ಧ ಕೋರ್ಟ್‌ನಲ್ಲಿ ಮಂಗಳವಾರ ಪ್ರಕರಣ ದಾಖಲು ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಬಿ.ಬೋಗಿ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ರೈತರಿಗೆ ಬೀಜಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೆ, ನಿಯಮ ಉಲ್ಲಂಘಿಸಿ ಬೀಜ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಜರುಗಿದ ಸಭೆಯಲ್ಲಿ ಸೂಚನೆ ನೀಡಿದ್ದರು.

ಹೀಗಾಗಿ ಮಂಗಳವಾರ ನಗರದ ಕೆ.ಸಿ.ಮತ್ತು ವಡ್ಡರಬಂಡಿ ರಸ್ತೆಯಲ್ಲಿರುವ 20ಕ್ಕೂ ಹೆಚ್ಚು ಬೀಜದ ಅಂಗಡಿಗಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ಹೆಚ್ಚಿನ ದರಕ್ಕೆ ಬೀಜಗಳನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ದಾಖಲೆ ಸಿಗಲಿಲ್ಲ. ಆದರೆ, ತೋಟಗಾರಿಕೆ ಇಲಾಖೆ ನಿಯಮ ಉಲ್ಲಂಘಿಸಿದ ಲಕ್ಷ್ಮ್ಮೀ, ಕಾರ್ತಿಕ, ಬೃಂದಾವನ್, ಶ್ರೀ ವೀರಭದ್ರೇಶ್ವರ, ಅಕ್ಷಯ, ಶ್ರೀ ಸದ್ಗುರು ಸೀಡ್ಸ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದಲ್ಲದೇ ಪರವಾನಗಿ ನಿಯಮ ಉಲ್ಲಂಘಿಸಿದ ಗವಿಸಿದ್ದೇಶ್ವರ ಟ್ರೇಡರ್ಸ್‌ ವಿರುದ್ಧ ಎರಡು ಹಾಗೂ ಏಕದಂತ ಟ್ರೇಡಿಂಗ್ ಕಂಪನಿ ವಿರುದ್ಧ ಕೃಷಿ ಇಲಾಖೆಯಿಂದ ಒಂದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net