

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಈಗಾಲೇ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ. ಮಾ.9ರಿಂದ 29ರ ವರೆಗೆ ನಡೆಯಲಿರುವ ವಾರ್ಷಿಕ ಪರೀಕ್ಷೆ ಹಿನ್ನೆಲೆ ಜಿಲ್ಲೆಯಲ್ಲಿ 16 ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ತಲುಪಿಸುವ ಕೆಲಸ ನಡೆದಿದೆ. ಕೋವಿಡ್ ಪರಿಣಾಮ ಕಳೆದ ವರ್ಷ ಪಠ್ಯಕ್ರಮದಲ್ಲಿ ಕಡಿತ ಮಾಡಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸುಲಭವಾಗಿತ್ತು. ಆದರೆ ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಪ್ರಮಾಣದಲ್ಲಿ ಪಠ್ಯಕ್ರಮದ ಆಧಾರದ ಮೇಲೆ ವಾರ್ಷಿಕ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ತಾಲೂಕಿನ 10, ಸಿರಗುಪ್ಪ ತಾಲೂಕಿನಲ್ಲಿ 2, ಸಂಡೂರು 2, ಕುರುಗೋಡು 1 ಹಾಗೂ ಕಂಪ್ಲಿ ಒಂದು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿವೆ. ಅದಕ್ಕಾಗಿ ಈಗಾಗಲೇ ಜಿಲ್ಲಾಡಳಿತದಿಂದ ಅಂತಿಮ ಹಂತದ ಪರಿಶೀಲನೆ ಕಾರ್ಯ ನಡೆದಿದೆ.
15,813 ವಿದ್ಯಾರ್ಥಿಗಳು ನೋಂದಣಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 15,813 ವಿದ್ಯಾರ್ಥಿಗಳು ದ್ವಿತೀಯ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ 12,194 ಹೊಸ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳು 2,808, ಖಾಸಗಿ ಅಭ್ಯರ್ಥಿಗಳು 811 ಜನ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 74 ಪಿಯು ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಸರ್ಕಾರಿ 19 , ಖಾಸಗಿ 47, ಅನುದಾನಿತ 8 ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯ ಪರೀಕ್ಷೆ ಬರೆದ ನಂತರ ಗೊತ್ತಾಗಲಿದೆ.
ಅಧಿಕಾರಿಗಳ ತಂಡ ರಚನೆ: ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನಿರ್ವಹಣೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಜಿಲ್ಲಾ ಖಜಾನೆ ಅಧಿಕಾರಿಗಳ ಮತ್ತು ಡಿಡಿಪಿಯು ಅಧಿಕಾರಿಗಳನ್ನೊಳಗೊಂಡಂತೆ ತ್ರಿ-ಸದಸ್ಯ ಸಮಿತಿ ನಿರ್ದೇಶನದಂತೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಬಳ್ಳಾರಿ ತಾಲೂಕು ವ್ಯಾಪ್ತಿ 3 ತಂಡ, ಸಿರುಗುಪ್ಪ, ಸಂಡೂರು, ಕುರುಗೋಡು, ಮತ್ತು ಕಂಪ್ಲಿ ತಲಾ ಒಂದು ತಂಡಗಳನ್ನು ರಚಿಸಲಾಗಿದೆ. 16 ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್‌ಗಳನ್ನು ಮುಚ್ಚಿಸುವ ಆದೇಶವನ್ನು ಹೊರಡಿಸುವಂತೆ ಇಲಾಖೆಯಿಂದ ಕೋರಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನೀಡಿದ ಸೂಚನೆಯಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಒಬ್ಬ ಅಧಿಕಾರಿಯನ್ನು ವೀಕ್ಷಕರೆಂದು ನೇಮಿಸಲಾಗಿದೆ.
ಕೇಂದ್ರದ ಸುತ್ತ ಕಣ್ಗಾವಲು: ಪರೀಕ್ಷೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿದ್ದು, ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರದಿಂದಲೇ ಆಯಾ ಮೌಲ್ಯ ಮಾಪನ ಕೇಂದ್ರಗಳಿಗೆ ಉತ್ತರ ಪತ್ರಿಕೆಗಳನ್ನು ಸೂಕ್ತ ಭದ್ರತೆಯೊಂದಿಗೆ ಇಲಾಖೆಗೆ ಕಳುಹಿಸಲಾಗುತ್ತದೆ. ಪರೀಕ್ಷೆ ಕೇಂದ್ರದಲ್ಲಿ ನಕಲಿ ಮಾಡಲು ಅವಕಾಶ ಇಲ್ಲದಂತೆ ಪ್ರತಿಕೊಠಡಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಕೊಠಡಿ ಮೇಲ್ವಿಚಾರಕ ಕೊರತೆ, ತರಗತಿ ಕೊಠಡಿಗಳ ಕೊರತೆ ಮತ್ತು ಬೆಂಚ್‌ಗಳ ಕೊರತೆ ಇರುವ ಪರೀಕ್ಷಾ ಕೇಂದ್ರಕ್ಕೆ ಹತ್ತಿರದ ತರಗತಿ ಕೊಠಡಿಗಳನ್ನು ಮತ್ತು ಬೆಂಚ್‌ಗಳನ್ನು ಉಪಯೋಗಿಕೊಳ್ಳಲು ತಿಳಿಸಲಾಗಿದೆ. ಜಿಲ್ಲೆಯಲ್ಲಿನ 16 ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳಿಗೆ ಸೂಚನೆ ನೀಡಲಾಗಿದೆ.
ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯ: ಜಿಲ್ಲೆಯಲ್ಲಿನ 16 ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಲು ಸೂಚನೆ ನೀಡಲಾಗಿದೆ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರವೇ ಬೇಸಿಕ್ ಮೊಬೈಲ್ ಸೆಟ್‌ನ್ನು ಮಾತ್ರ ಉಪಯೋಗಿಸಲು ಅನುಮತಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ತರಹದ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಪರೀಕ್ಷಾ ಕೊಠಡಿಯ ಹತ್ತಿರವಾಗಲಿ ಅಥವಾ ಪರೀಕ್ಷಾ ಕೊಠಡಿಯ ಒಳಗಡೆಯಾಗಲಿ ಬೇರೆಯವರು ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಅಕ್ರಮ ಎಸಗಿದರೆ ಶಿಕ್ಷೆ: 1983ರ ಶಿಕ್ಷಣ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪರೀಕ್ಷೆ ಅಕ್ರಮಗಳಲ್ಲಿ ತೊಡಗಿದವರಿಗೆ ಅಥವಾ ಪ್ರಶ್ನೆ ಪತ್ರಿಕೆ ಮಾರಾಟ, ಸಾಗಾಟ ಅಥವಾ ಅದಕ್ಕೆ ಸಹಕರಿಸಿದವರಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.