ಅಂಡರ್ ಪಾಸ್ ಕಾಮಗಾರಿಯಲ್ಲಿ ಹಗರಣ

Published on

ಬಳ್ಳಾರಿ : ಇಲ್ಲಿನ ಕನಕದುರ್ಗಮ್ಮ ದೇವಸ್ಥಾನದ ಬಳಿಯ ರೈಲ್ವೆ ಅಂಡರ್ ಪಾಸ್‌ನ್ನು ಕೂಡಲೇ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ನೇತೃತ್ವದಲ್ಲಿ ಬುಧವಾರವೂ ಪ್ರತಿಭಟನೆ ಮುಂದುವರೆಯಿತು.

ಬಳಿಕ ವೈ.ಎಂ.ಸತೀಶ್ ಮಾತನಾಡಿ, ಕನಕ ದುರ್ಗಮ್ಮ ದೇವಸ್ಥಾನದ ರೈಲ್ವೆ ಅಂಡರ್ ಪಾಸ್ ಕಾಮಗಾರಿಯಲ್ಲಿ ದೊಡ್ಡ ಹಗರಣವಾಗಿದೆ. ಈ ಸೇತುವೆ ದುರಸ್ತಿಗೆ 1.80 ಕೋಟಿ ರೂ. ಅನುದಾನ ವ್ಯಯಿಸಲಾಗಿದೆ. ಜಿಲ್ಲಾಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಿ ಎಂಬುದಾಗಿ ಮನವಿ ಮಾಡಿದರು. ಯಾರೇ ಒಬ್ಬ ಜನಪ್ರತಿನಿಧಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ವಿನಾಃ ತೊಂದರೆಯಾಗುವ ರೀತಿಯಲ್ಲಿ ಅಲ್ಲ ಎಂದರು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಯಾವ ವ್ಯಕ್ತಿಯ ವಿರುದ್ಧ ಆರೋಪಿಸಿಲ್ಲ. ಮೊದಲ ಹಾಗೂ ಅನಿವಾರ್ಯ ಕಾರಣದಿಂದ ನಗರ ಶಾಸಕ ನಾರಾಭರತರೆಡ್ಡಿ ವಿರುದ್ಧ ಮಾತನಾಡಬೇಕಾಗುತ್ತದೆ. ನಗರ ಶಾಸಕರ ಕುತಂತ್ರದಿಂದ ಅಂಡರ್ ಪಾಸ್ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಕುಟುಕಿದರು. ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡ ಬಳಿಕ ಟೆಕ್ನಿಕಲ್ ತಂಡ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ ಎಂಬುದಾಗಿ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಆದರೆ, ಫೆ.9ತಾರೀಖಿನ ದಿನದಂದೇ ಏಕೆ ಉದ್ಘಾಟಿಸುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಮುಂದಿನ ದಿನಗಳಲ್ಲೇ ಸಾರ್ವಜನಿಕರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಗೋವಿಂದರಾಜುಲು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಮೊದಲ ಅಭಿವೃದ್ಧಿ ಮಾಡಿದ್ದು ಅಂಡರ್ ಪಾಸ್ ದುರಸ್ತಿ. ಆದರೆ, ಇನ್ನೂ ಉದ್ಘಾಟನೆಯಾಗುವ ಮುನ್ನವೇ ಕಾಮಗಾರಿಯಲ್ಲಿ ಹಗರಣ ನಡೆದಿದೆ. ಈ ಸಂಚಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ನಗರದಲ್ಲಿ ಸಂಚಾರಿಸಲು ಸಂಕಷ್ಟ ಪಡುವಂತೆಯಾಗಿದೆ ಎಂದರು.

ಬಳಿಕ ಪ್ರತಿಭಟನಕಾರರು ಸಂಚಾರ ಬಂದ್ ಮಾಢಿದ್ದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಯತ್ನಿಸಿದರು. ಪೊಲೀಸರ ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.

ಬಾಕ್ಸ್ : ಇಲ್ಲಿನ ದುರ್ಗಮ್ಮಗುಡಿ ಬಳಿಯ ರೈಲ್ವೆ ಅಂಡರ್ ಪಾಸ್ ರಸ್ತೆಯನ್ನು ಫೆ.9 ರಂದು ಸಂಜೆ ಶಾಸಕ ನಾರಾ ಭರತರೆಡ್ಡಿ ಉದ್ಘಾಟಿಸಲಿದಾರೆ ಎಂಬುದಾಗಿ ಶಾಸಕರ ಬೆಂಬಲಿಗರು ವಾಟ್ಸ್‌ಪ್‌ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಸುವರ್ಣ ಪಥ ಎಂಬುದಾಗಿ ನಾಮಕರಣ ಮಾಡಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಯದೇ ಇದ್ದ ಈ ಪ್ರದೇಶದಲ್ಲಿ ಉದ್ಘಾಟನೆಯಾಗುವ ಮುನ್ನವೇ ಕಿತ್ತುಹೋಗಿರುವ ಪಾದಚಾರಿಯ ಬ್ಯಾರಿಕೇಡ್ ಕಂಬಿಗಳನ್ನು ಮತ್ತೆ ನಿಲ್ಲಿಸಿ ದುರಸ್ತಿಗೊಳಿಸುತ್ತಿದ್ದರು. ರಾಯಲ್ ವೃತ್ತದ ಬದಿಯ ಪಾಸ್‌ನಲ್ಲಿ ಕೆಲ ಬ್ಯಾರಿಕೇಡ್ ಕಂಬಿಗಳು ಮುರಿದು ಬಿದ್ದಿರುವುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net