

ಬಳ್ಳಾರಿ: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ನಗರದ ರಾಯಲ್ ವೃತ್ತದಲ್ಲಿ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ರಸ್ತೆ ಸಂಚಾರ ತಡೆದು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮೀಸಲು ಹೆಚ್ಚಳ ಮಾಡುವ ವೇಳೆಯೇ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು. ಆದರೆ, ಬಿಜೆಪಿ ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ಮೀಸಲು ಹೆಚ್ಚಳ ಮಾಡುತ್ತೇವೆ ಎಂದು ಹೇಳಿದವರು ಇನ್ನೂ ಮಾಡಿಲ್ಲ. ಮೀಸಲಾತಿ ನಮ್ಮ ಹಕ್ಕು ಪಡೆಯುತ್ತೇವೆ. ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ವಾಲ್ಮೀಕಿ ಗುರುಪೀಠದ ಪ್ರಸಾನ್ನಾನಂದಪುರಿ ಸ್ವಾಮೀಜಿ ಧರಣಿ ಸತ್ಯಾಗ್ರಹ ನೂರು ದಿನ ಪೂರೈಸಿದೆ. ಆದರೆ, ಮುಖ್ಯಮಂತ್ರಿ ಹಾಗೂ ಸಚಿವರು ಅವರನ್ನು ಭೇಟಿ ಮಾಡಿ, ಭರವಸೆ ನೀಡುವುವರೇ ಹೊರತು ಹೆಚ್ಚಳ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಎನ್.ನಾಗಮೋಹನ್‌ದಾಸ್ ವರದಿ ತಕ್ಷಣ ಜಾರಿಗೊಳಿಸಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.3 ರಿಂದ 7.5ಕ್ಕೆ ಹೆಚ್ಚಿಸಬೇಕು. ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಮಹಿರ್ಷಿ ವಾಲ್ಮೀಕಿ ಹೆಸರನ್ನು ನಾಮಕರಣ ಮಾಡಬೇಕು. ಎಸ್ಸಿ, ಎಸ್ಟಿ ಪಂಗಡದ ಸಮುದಾಯದ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಮತ್ತು ನೀಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಲೆಮಾರಿ ಬುಡಕಟ್ಟು ಸಮುದಾಯದ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯವನ್ನು ಶೀಘ್ರವೇ ಸ್ಥಾಪನೆ ಮಾಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು. ಬಳಿಕ ಎಸಿ ಆಕಾಶ್‌ಶಂಕರ್‌ಗೆ ಮನವಿ ಸಲ್ಲಿಸಿದರು. ಮುಖಂಡರಾದ ಕಮಲ ಮರಿಸ್ವಾಮಿ, ಮಾನಯ್ಯ, ಮಲ್ಲಯ್ಯ, ಕೆಕೆಹಾಳ್ ಸತ್ಯಣ್ಣ, ಗೋವಿಂದ, ಪುಷ್ಪ, ಗಡ್ಡಂ ತಿಮ್ಮಪ್ಪ, ಬಸರಕೋಡು ಗೋವಿಂದ ಇತರರಿದ್ದರು.