ಬಳ್ಳಾರಿ : ಸಂತಕವಿ ಸರ್ವಜ್ಞರು ಸರ್ವರಲ್ಲಿ ಬೆರೆತು ಕಲಿತ ನಂತರ ಶ್ರೇಷ್ಠ ವಚನಕಾರರಾದವರು ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ ಹೇಳಿದರು.
ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
16 ನೇ ಶತಮಾನದ ವಚನಯುಗದ ತ್ರಿಪದಿ ಬ್ರಹ್ಮ ಸಂತ ಸರ್ವಜ್ಞನು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮ ತ್ರಿಪದಿ ವಚನದ ಮೂಲಕ ತಿದ್ದಿ ಸಮಾನತೆ ಸಾರಿದವರು. ಸರ್ವಜ್ಞನು ವಚನಕಾಲದ ಶ್ರೇಷ್ಠ ದಾರ್ಶನಿಕ ವಚನಕಾರರಲ್ಲಿ ಒಬ್ಬರಾಗಿದ್ದಾರೆ. ಗಾದೆ ಮಾತಿನಂತೆ ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞರು ರಚಿಸದ ವಚನಗಳಿಲ್ಲ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಮಾತನಾಡಿ, ಸರ್ವಜ್ಞರ ತ್ರಿಪದಿ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದೆ. ಒಗ್ಗಟ್ಟು, ಒಮ್ಮತ, ಐಕ್ಯತೆ ಭಾವನೆಯಿಂದ ಕೂಡಿ ಬಾಳ್ವೆ ನಡೆಸಬೇಕು ಎಂದರು.
ಸಂತಕವಿ ಸರ್ವಜ್ಞ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಡಗರದಿಂದ ನಡೆಯಿತು. ಮೆರವಣಿಗೆಯು ಮುನ್ಸಿಪಾಲ್ ಕಾಲೇಜು ಮೈದಾನದಿಂದ ಆರಂಭವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಸಾಗಿ ಬಂದು ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರಗು ನೀಡಿದವು.