ಭಯ ಬಿಟ್ಟು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ: ಹೊಸಪೇಟೆಯಲ್ಲಿ ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿ ವರ್ಧನ್ ಸಲಹೆ

Hospet SSLC Students Workshop
ಹೊಸಪೇಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಕಾರ್ಯಾಗಾರವನ್ನು ಡಿವೈಎಸ್ಪಿ ರಘುಕುಮಾರ್ ಉದ್ಘಾಟಿಸಿದರು.
Published on

ಹೊಸಪೇಟೆ: ಪ್ರತಿಯೊಬ್ಬ ವಿದ್ಯಾರ್ಥಿಗೆ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟವಾಗಿದ್ದು, ಇಷ್ಟದಿಂದ ಓದುವ ಮೂಲಕ ಭಯ ಬಿಟ್ಟು ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಡಿಡಿ ವರ್ಧನ್ ಹೇಳಿದರು.

ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಪೊಲೀಸ್ ಠಾಣೆಯಿಂದ ಶುಕ್ರವಾರ ನಗರದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತೆ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಾಗಾರ ಉದ್ಘಾಟಿಸಿದ ಡಿವೈಎಸ್ಪಿ ರಘುಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ವಿಷಯಗಳ ಮೇಲೆ ಹಿಡಿತ ಸಾಧಿಸಬೇಕು. ಇದರಿಂದ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆ ಎಂದು ಕೀಳರಿಮೆ ಬೇಡ. ಪರೀಕ್ಷೆ ಸಮರ್ಥವಾಗಿ ಎದುರಿಸುತ್ತೇನೆ ಎಂಬ ಮನೋಭಾವ ಹೊಂದಬೇಕು ಎಂದರು.

ಎಸಿ ಸಿದ್ದರಾಮೇಶ್ವರ ಮಾತನಾಡಿ, ಪೊಲೀಸ್ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕೆ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ. ನಾನೂ ಕನ್ನಡ ಶಾಲೆಯಲ್ಲೇ ಓದಿ ಕೆಎಎಸ್ ಉತ್ತೀರ್ಣನಾಗಿದ್ದೇನೆ. ಇದು ಸರ್ಕಾರಿ ಶಾಲೆಗೆ ಇರುವ ಶಕ್ತಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಬೇಕು. ಯಾವರೀತಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಯಾವ ಪಾಠವನ್ನು ಹೆಚ್ಚು ಓದಬೇಕು ಎಂಬುದನ್ನು ಅರಿಯಬೇಕು. ಓದಿದ್ದನ್ನು ಸ್ನೇಹಿತರೊಂದಿಗೆ ಚರ್ಚಿಸಬೇಕು. ಇದರಿಂದ ನೆನಪಿನಲ್ಲಿ ಉಳಿಯುತ್ತದೆ. ಈಗ ನೀವು ಚೆನ್ನಾಗಿ ಓದಿದರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಮತ್ತೆ ಓದುವುದು ತಪ್ಪುತ್ತದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಹರಿಪ್ರಸಾದ್ ಕನ್ನಡ, ನವೀನ್ ಕುಮಾರ್ ವಿಜ್ಞಾನ, ಪುರುಷೋತ್ತಮ್ ಇಂಗ್ಲಿಷ್, ಗೂಳೆಪ್ಪ ಬೆಳ್ಳೆಕಟ್ಟೆ ಗಣಿತ ವಿಷಯ ಕುರಿತು ಉಪನ್ಯಾಸ ನೀಡಿದರು. ನೋಡಲ್ ಅಧಿಕಾರಿ ಸತ್ಯನಾರಾಯಣ, ಶ್ರೀ ಗುರು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ, ವಿಜಯಕುಮಾರ್, ನಗರ ಠಾಣೆ ಸಿಪಿಐ ಶ್ರೀನಿವಾಸ, ಸನ್ಮಾರ್ಗ ಗೆಳೆಯರ ಬಳಗದ ಕರ್ಯದರ್ಶಿ ಚಂದ್ರಶೇಖರ್ ಆಚಾರ್, ಸದಸ್ಯರಾದ ಯರ‌್ರಿಸ್ವಾಮಿ, ಸತ್ಯನಾರಾಯಣ, ಸಿದ್ದು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net