ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ; ಎರಡು ಗುಂಪುಗಳ ನಡುವೆ ವಿವಾದ

Published on

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮAದಿರ ಬಳಿ ಪ್ರತಿಷ್ಠಾಪಿಸಿ, ಕಳೆದ ಒಂದುವರೆ ವರ್ಷಗಳಿಂದ ಉದ್ಘಾಟನೆ ಭಾಗ್ಯವಿಲ್ಲದ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಪರ-ವಿರೋಧದ ಬೆಳಗ್ಗೆ ಗಣ್ಯರು ಬೆಳಗ್ಗೆ ಮಾಲಾರ್ಪಣೆ ಮಾಡಿದ ಕೆಲ ಗಂಟೆಗಳಲ್ಲೇ ಮಧ್ಯಾಹ್ನದ ಹೊತ್ತಿಗೆ ಪುತ್ಥಳಿಗೆ ಪುನಃ ಪ್ಲಾಸ್ಟಿಕ್ ಸುತ್ತಿ ಯಥಾಸ್ಥಿತಿಗೆ ತಂದಿರುವ ಘಟನೆ ಗುರುವಾರ ನಡೆಯಿತು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮAದಿರ ಬಳಿ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ಶ್ರೀರಾಮುಲು, ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಸಿದ್ಧಪಡಿಸಿದ್ದು, ಸ್ಥಳೀಯ ಸಂಸ್ಥೆಗಳ ಅನುಮತಿ ಇಲ್ಲದೇ ರಾತ್ರೋರಾತ್ರಿ ಪ್ರತಿಷ್ಠಾಪಿಸಲಾಗಿತ್ತು. ಪರಿಣಾಮ ಇದಕ್ಕೆ ಸ್ಥಳೀಯ ಮಹಾನಗರ ಪಾಲಿಕೆ, ಬುಡಾ ಆಕ್ಷೇಪಿಸಿತ್ತು. ಮೇಲಾಗಿ ಇದೇ ವೇಳೆ ಚುನಾವಣಾ ನೀತಿ ಸಂಹಿತೆಯೂ ಜಾರಿಯಾದ ಹಿನ್ನೆಲೆಯಲ್ಲಿ ಪ್ರತಿಮೆಯ ಅನಾವರಣವೂ ನೆನೆಗುದಿಗೆ ಬಿತ್ತು. ವಿಧಾನಸಭೆ, ಲೋಕಸಭೆ ಚುನಾವಣೆಗಳೇ ಮುಗಿದರೂ, ಪ್ರತಿಮೆ ಅನಾವರಣಕ್ಕೆ ಸಂಬAಧಪಟ್ಟ ಸ್ಥಳೀಯ ಸಂಸ್ಥೆಗಳು ಕ್ರಮಕೈಗೊಂಡಿಲ್ಲ. ಪ್ರತಿಮೆ ಅನಾವರಣಕ್ಕೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಲು ಹಾಲುಮತ ಸಮುದಾಯದ ಮುಖಂಡರು ಇದ್ದರು.

ಆದರೆ, ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಅನುಮತಿ ಇಲ್ಲದೇ, ಹಾಲುಮತ ಸಮುದಾಯದ ಒಂದು ಬಣದ ಮುಖಂಡರು, ಏಕಾಏಕಿ ಸಂಗೊಳ್ಳಿ ರಾಯಣ್ಣರ ಪುತ್ತಳಿಗೆ ಸುತ್ತಿದ್ದ ಪ್ಲಾಸ್ಟಿಕ್ ಕವರ್‌ಗಳನ್ನು ತೆರವುಗೊಳಿಸಿ, ಮಾಲಾರ್ಪಣೆ ಮಾಡಿ ಒಂದು ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. ಜೊತೆಗೆ ಮಾಜಿ ಸಚಿವ ಬಿ.ಶ್ರೀರಾಮುಲುರನ್ನು ಕರೆತಂದು ಮಾಲಾರ್ಪಣೆ ಮಾಡಿಸಿದ್ದಾರೆ. ಬಳಿಕ ಸಂಸದ ಈ.ತುಕಾರಾಂ ಅವರು ಸಹ ಬಂದು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಇವರೊಂದಿಗೆ ಸಮುದಾಯದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಉಪಮೇಯರ್ ಬೆಣಕಲ್ ಬಸವರಾಜ ಸೇರಿ ಹಲವರು ನಮನ ಸಲ್ಲಿಸಿದ್ದಾರೆ.

ಆದರೆ, ಈ ಕುರಿತು ಸ್ಥಳೀಯ ಶಾಸಕರಾದ ನಾರಾ ಭರತ್‌ರೆಡ್ಡಿ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದ್ದು, ಕೂಡಲೇ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು, ಪುನಃ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಪ್ಲಾಸ್ಟಿಕ್‌ನಿಂದ ಮುಚ್ಚಿ, ಈ ಮೊದಲಿನಂತೆ ಯಥಾಸ್ಥಿತಿಗೆ ತಂದಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಕೆಲವರು, ಆಗಿದ್ದು, ಆಗಿದೆ. ಮುಚ್ಚದಂತೆ ಹಾಗೆ ಬಿಟ್ಟುಬಿಡಿ ಎಂದು ಗಲಾಟೆ ಮಾಡಿದರೆ, ಇನ್ನು ಕೆಲವರು, ಗಣ್ಯರನ್ನು ಆಹ್ವಾನಿಸದೇ ಕದ್ದುಮುಚ್ಚಿ ಅನಾವರಣ ಮಾಡುವುದು ಸರಿಯಲ್ಲ. ಎಲ್ಲ ರೀತಿಯಿಂದ ಅನುಮತಿ ಪಡೆದು ಅದ್ಧೂರಿಯಾಗಿ ಪ್ರತಿಮೆಯನ್ನು ಅನಾವರಣ ಮಾಡೋಣ ಎಂದು ಎರಡು ಬಣಗಳ ನಡುವೆ ವಾದ-ವಿವಾದಗಳು ನಡೆದಿದ್ದು, ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ಮೊದಲು ನೀವು ಇಲ್ಲಿಂದ ತೆರಳಿ, ಪಾಲಿಕೆ ಕೆಲಸಕ್ಕೆ ಅಡ್ಡಿಪಡಿಸಬೇಡಿ ಎಂದು ಎಲ್ಲರನ್ನೂ ಗದರಿಸಿ ಚದುರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net