ಸಂಡೂರು ಐದನೇ ಬಾರಿ ಕೈ ವಶ

Published on

ಬಳ್ಳಾರಿ : ಸತತ ಐದನೇ ಬಾರಿಗೆ ಕೈ ವಶವಾಗುವ ಮೂಲಕ ಮತ್ತೊಮ್ಮೆ ಸಂಡೂರು ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದಾಗಿ ಸಾಬಿತಾಗಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ತುಕಾರಾಮ್ 93,616, ಬಿಜೆಪಿಯ ಬಂಗಾರು ಹನುಮಂತು 83,697 ಮತಗಳ ಪಡೆದಿದ್ದಾರೆ. ಒಟ್ಟಾರೆ ಅನ್ನಪೂರ್ಣ ತುಕಾರಾಮ್ 9,649 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಶೇ. 51.96% ಮತ ಗಳಿಸಿದ್ದಾರೆ.

ಎರಡು ಪಕ್ಷಗಳಿಂದ ಪ್ರಚಾರದಲ್ಲಿ ವೈಯಕ್ತಿಕ ನಿಂದನೆ, ಟೀಕೆಗಳು, ಗ್ಯಾರಂಟಿ ಯೋಜನೆಗಳ, ಸರ್ಕಾರದ ಹಗರಣಗಳ ಬಗ್ಗೆ ಪ್ರಸ್ತಾಪಿಸಿ ಮತ ಸೆಳೆಯಲು ಮುಂದಾದರು. ಅಲ್ಲದೆ, ಕ್ಷೇತ್ರ ಬಿಟ್ಟು ಹಲವು ವರ್ಷಗಳೆ ಕಳೆದರೂ ಹಿಡಿತ ತಪ್ಪದ ಸಚಿವ ಸಂತೋಷ ಲಾಡ್ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ತನ್ನದೆ ಎಂಬಂತೆ ಟೊಂಕು ಕಟ್ಟಿ ಪ್ರಚಾರ ನಡೆಸಿದರು. ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಹದಿನಾಲ್ಕು ವರ್ಷಗಳ ಬಳಿಕ ಜಿಲ್ಲೆಗೆ ಪ್ರವೇಶ ಮಾಡಿರುವುದಲ್ಲದೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಹೊಸ ಇತಿಹಾಸ ಸೃಷ್ಟಿಸಿ ಜಿಲ್ಲೆಯಲ್ಲಿ ಬಿಜೆಪಿಯ ಹಳೆಯ ವರ್ಚಸ್ಸು ಹೆಚ್ಚಿಸುವ ಸಂಕಲ್ಪ ತೊಟ್ಟಿದ್ದರು. ಆದರೆ, ಸಂಡೂರಿನ ಮತದಾರರು ಇದಕ್ಕೆ ಅವಕಾಶ ಕೊಡಲಿಲ್ಲ. ಈ ಚುನಾವಣೆಯಲ್ಲಿ ಸೋಲುವ ಮೂಲಕ ಬಿಜೆಪಿ ಮತ್ತೆ ಮಂಕಾಯಿತು.

ಬಿಜೆಪಿ ಮೈನಸ್, ಕಾಂಗ್ರೆಸ್ ಪ್ಲಸ್ : ಸ್ಥಳೀಯ ರಾಜಮನೆತನದ ಕೆ. ಘೋರ್ಪಡೆ ಬೆಂಬಲಿತರಿಗೆ ಟಿಕೆಟ್ ನೀಡದೆ ಇರುವುದು ದೊಡ್ಡ ಅಸಮಾಧಾನವಿತ್ತು. ಅಲ್ಲದೆ, ಮಾಜಿ ಸಚಿವ ಆನಂದಸಿಂಗ್ ಹಾಗೂ ಅಭ್ಯರ್ಥಿ ನಡುವೆ ಮನಸ್ತಾಪದಿಂದ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಲಿಲ್ಲ. ರೆಡ್ಡಿ ಬೆಂಬಲಿಗ ಗೆದ್ದರೆ ಕ್ಷೇತ್ರದ ಗಣಿಯ ಮೇಲೆ ರೆಡ್ಡಿಯ ಕಣ್ಣು ಬೀಳಬಹುದು ಎಂಬ ಭಯದಿಂದ ಸ್ಥಳೀಯ ಗಣಿಮಾಲೀಕರು ಬಿಜೆಪಿ ಅಭ್ಯರ್ಥಿಗೆ ಮನ್ನಣೆ ಹಾಕಲು ಹಿಂದೇಟು ಹಾಕಿದರು. 2018ರಲ್ಲಿ ಪಕ್ಷೇತರ ಸ್ಪರ್ಧಿಸಿದ್ದ ಬಂಗಾರು ಹನುಮಂತು ಮಹಿಳೆಯರಿಗೆ ನಕಲಿ ಮೂಗುಗತ್ತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಬಿಜೆಪಿ ಅಭ್ಯರ್ಥಿ ಕ್ಷೇತ್ರದ ಹೊರಗಿನವರು ಎಂಬುದನ್ನು ಕಾಂಗ್ರೆಸ ಕಾರ್ಯಕರ್ತರು ಮತದಾರರಲ್ಲಿ ಬಲವಾಗಿ ತುಂಬಿದ್ದರು. ಕ್ಷೇತ್ರದಲ್ಲಿನ ಲಿಂಗಾಯತ ಹಾಗೂ ಪ್ರಬಲ ಜಾತಿಗಳ ಮತಗಳ ಓಲೈಕೆಗಾಗಿ ಮಾಜಿ ಸಿಎಂ ಬಿ.ಎಸ್.ಯೂಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ನಾಯಕರು ಸರ್ಕಾರದ ಹಗರಣಗಳ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಮತಗಳ ಸೆಳೆಯಲು ಮುಂದಾದರು. ಆದರೆ, ಎಸ್ಟಿ, ಎಸ್‌ಸಿ, ಕುರುಬ, ಮುಸ್ಲಿಂ ಮತಗಳೇ ನಿರ್ಣಯಕರಾಗಿದ್ದರಿಂದ ಸಿಎಂ ಸಿದ್ದರಾಮಯ್ಯ ಮೂರು ದಿನ ಪ್ರಚಾರ ನಡೆಸಿ ಗ್ಯಾರಂಟಿ ಯೋಜನೆಗಳ ಮುಂದಿಟ್ಟುಕೊಂಡು ಮತ ಸೆಳೆಯುವಲ್ಲಿ ಯಶ್ವಸಿಯಾದರು. ಕಳೆದ ಹಲವು ವರ್ಷಗಳಿಂದ ಸತತವಾಗಿ ಗೆದ್ದಿರುವ ಈ.ತುಕಾರಾಮ್ ಮತದಾರರಿಗೆ ಕೈ ಸಿಗುವ ವ್ಯಕ್ತಿ ಎಂಬ ಮಾತು ಜೋರಾಗಿತ್ತು. ಪ್ರಮುಖವಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಕ್ಷೇತ್ರದ ಹಿಡಿತ ತಪ್ಪಿಲ್ಲ. ಕುಟುಂಬ ರಾಜಕಾರಣ ಬೇಡ ಎಂಬುದಾಗಿ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನವನ್ನು ಹೊಗಲಾಡಿಸುವಲ್ಲಿ ಲಾಡ್ ಪ್ರಮುಖ ಪಾತ್ರವಹಿಸಿದರು. ಆದರೆ, ಕಳೆದ ಕೆಲ ಚುನಾವಣೆಗಳಿಂದ ಸಂಡೂರಿನಲ್ಲಿ ಬಿಜೆಪಿ ಪಕ್ಷದ ಮತ ಗಳಿಗೆ ಹೆಚ್ಚಿಸುತ್ತಾ ಬಂದಿರುವುದು ಕಾಂಗ್ರೆಸ್‌ಗೆ ಒಂದು ಎಚ್ಚರಿಕೆ ಗಂಟೆಯಾಗಲಿದೆ.

ಬಾಕ್ಸ್ : ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮತ ಎಣಿಕೆ ವೇಳೆ ಎರಡು ಸುತ್ತು ಅಧಿಕೃತ ಘೋಷಣೆ ಬಾಕಿಯಿತ್ತು. ಆದರೆ, ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಜೋರು ಕೇಕೆ ಹಾಕಿದರು. ಇದಕ್ಕೆ ಬಂಗಾರು ಹನುಮಂತು ತೊಡೆ ತಟ್ಟಿ ಇಲ್ಲಿ ಬರಿ ತೊಡೆ ತಟ್ಟಿದ ಘಟನೆ ನಡೆಯಿತು.

ಕೋಟ್... ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದ್ದು, ಅಧರ್ಮ ಗೆಲುವು ಸಾಧಿಸಿದೆ. ಬಿಜೆಪಿ ನಾಯಕರಿಗೆ ಗೆಲುವುದಾಗಿ ಮಾತು ಕೊಟ್ಟಿದ್ದೆ. ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಸೋಲಿನ ಹೊಣೆ ನಾನೇ ಹೊರುವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.

- ಬಂಗಾರು ಹನುಮಂತು, ಬಿಜೆಪಿ ಅಭ್ಯರ್ಥಿ, ಸಂಡೂರು.

ಕೋಟ್.... ಈ ಗೆಲುವಿನಿಂದ ಇನ್ನೂ ಜವಾಬ್ದಾರಿ ಹೆಚ್ಚಿದೆ. ಮತದಾರರ ನಿರೀಕ್ಷೆಯಂತೆ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನಿಸುವೆ. ಕಳೆದ ಬಾರಿಗಿಂತ ಈ ಬಾರಿ ಶೇ.4% ಮತ ಪ್ರಮಾಣ ಕಾಂಗ್ರೆಸ್ ಹೆಚ್ಚಿದೆ. ಕ್ಷೇತ್ರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬಸ್ ನಿಲ್ದಾಣ ಅಭಿವೃದ್ದಿಗೆ ಮೊದಲ ಅದ್ಯತೆ ನೀಡುವೆ.

- ಈ.ಅನ್ನಪೂರ್ಣ ತುಕಾರಾಮ್, ಕಾಂಗ್ರೆಸ್ ಅಭ್ಯರ್ಥಿ, ಸಂಡೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net