ಬಳ್ಳಾರಿ ಸಮಾವೇಶಕ್ಕೆ ಕೊಪ್ಪಳದಿಂದ ಲಕ್ಷ ಜನ: ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜಾ ಶರತ್ಚಂದ್ರ ನಾಯಕ ಮಾಹಿತಿ

BJP
Published on

ಕೊಪ್ಪಳ: ಬಳ್ಳಾರಿಯಲ್ಲಿ ನ.20ಕ್ಕೆ ಎಸ್ಟಿ ಸಮಾವೇಶ ನಡೆಯಲಿದ್ದು, 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕೊಪ್ಪಳ ಜಿಲ್ಲೆಯಿಂದ ಒಂದು ಲಕ್ಷ ಜನ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜಾ ಶರತ್ಚಂದ್ರ ನಾಯಕ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಾಡಿದ್ದು, ಇದೊಂದು ಐತಿಹಾಸಿಕ ಘಟನೆಯಾಗಿದೆ. ಸಮುದಾಯದ ಜನ ಎಂದೂ ಮರೆಯುವುದಿಲ್ಲ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ಸಚಿವ ಬಿ.ಶ್ರೀರಾಮುಲು ಅವರ ಪ್ರಯತ್ನದ ಫಲವಾಗಿ ಮೀಸಲಾತಿ ಹೆಚ್ಚಳವಾಗಿದೆ. ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮುಖ್ಯ ಅತಿಥಿಯಾಗಿ ಆಗಮಿಸುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಸೇರಿ ರಾಜ್ಯ, ಕೇಂದ್ರ ಸಚಿವರು ಭಾಗಿಯಾಗುವರು ಎಂದರು.

ಸಮಾವೇಶಕ್ಕೆ ಜಿಲ್ಲೆಯಿಂದ 600 ಬಸ್, ಒಂದು ಸಾವಿರ ಕ್ರೂಸರ್ ವ್ಯವಸ್ಥೆ ಮಾಡಿದ್ದೇವೆ. ಉಳಿದಂತೆ ಸ್ವಂತ ವಾಹನ ಇರುವವರು ಆಗಮಿಸಲಿದ್ದಾರೆ. ಪ್ರತಿ ಗ್ರಾಮದಿಂದ ಜನ ತೆರಳುವ ವ್ಯವಸ್ಥೆಯಾಗಿದೆ. ಬಳ್ಳಾರಿ, ರಾಯಚೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನ ಆಗಮಿಸುವರೆಂದು ಮಾಹಿತಿ ನೀಡಿದರು. ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹುಲಿಹೈದರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಗಾಣದಾಳ, ಎಸ್ಟಿ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ರಮೇಶ್ ಮುದ್ಲಾಪುರ, ಮಾಧ್ಯಮ ವಕ್ತಾರ ಮಹೇಶ್ ಹಾದಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net