ವೃತ್ತಗಳ ಕಾಮಗಾರಿ ಸಂಚಾರಕ್ಕೆ ಕಿರಿಕಿರಿ

Published on

ಬಳ್ಳಾರಿ : ನಗರದ ಪ್ರಮುಖ ವೃತ್ತಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ವಿವಿಧ ಕಾಮಗಾರಿಗಳು ಅಮೆಗಾತಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರ ಹಾಗೂ ವಾಹನಗಳು ಸಂಚರಿಸಲು ಪರದಾಡುತ್ತಿದ್ದಾರೆ.

ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಕ್ಲಾಕ್ ಟವರ್, ಎಸ್ಪಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ, ಕೌಲಬಜಾರ್‌ನ ಫಸ್ಟ್ ಗೇಟ್ ಬಳಿ ವಾಚ್ ಟವರ್, ಸುಧಾ ಕ್ರಾಸ್ ಬಳಿ ರೈಲು ಮೇಲು ಸೇತುವೆ, ಕೆಇಬಿ ವೃತ್ತದಲ್ಲಿ ಆಶ್ವರೂಢ ಬಸವೇಶ್ವರ ಪುತ್ಥಳಿ ನಿರ್ಮಿಸಲು ಕೆಲ ದಿನಗಳ ಹಿಂದಯೇ ಭೂಮಿ ಪೂಜೆ ನಡೆದಿದ್ದು ಕಾಮಗಾರಿ ಆರಂಭವಾದ ಬಳಿಕ ಇನ್ನೂ ಟ್ರಾಫಿಕ್ ಸಮಸ್ಯೆ ಹೆಚ್ಚಲಿದೆ.

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಮಾಜಿ ಸಚಿವ ಬಿ.ಶ್ರೀರಾಮುಲು ಕ್ಲಾಕ್ ಟವರ್ ಕಾಮಗಾರಿಗೆ ಚಾಲನೆ ನೀಡಿ ಏಳು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಕಾಮಗಾರಿ ಪ್ರಗತಿ ಮೂರನೇ ವರ್ಷಕ್ಕೆ ಬಂದಿದೆ. ಸದ್ಯ, ಬಹುತೇಕ ಕ್ಲಾಕ್ ಟವರ್ ನಿರ್ಮಾಣ ಮುಗಿದಿದ್ದು ಸುತ್ತಲೂ ಕಾಮಗಾರಿ ನಡೆಯುತ್ತಿದೆ. ಕ್ಲಾಕ್ ಟವರ್ ಸುತ್ತಲೂ ಸ್ಥಳ ಅಕ್ರಮಿಸದೆ ಕಾಮಗಾರಿ ಆರಂಭಿಸಿದೆ. ಅಲ್ಲದೆ, ಕೆಲ ದಿನಗಳ ಹಿಂದಯೇ ಗಡಗಿ ಚೆನ್ನಪ್ಪ ವೃತ್ತದಿಂದ ದುರ್ಗಮ್ಮ ಗುಡಿಯ ರೈಲು ಕೆಳ ಸೇತುವೆವರೆಗೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಈ ವೃತ್ತದ ಮೂಲಕ ಸಂಚಾರಿಸುವ ಸವಾರರು ಹೈರಾಣಗಿದ್ದಾರೆ. ಎಸ್ಪಿ ವೃತ್ತದಲ್ಲಿ ಕಳೆದ ಮೂರು ತಿಂಗಳ ಹಿಂದಯೇ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ಸ್ಥಳ ಅಕ್ರಮಿಸಿಕೊಂಡಿದೆ. ಆದರೆ, ಈವರೆಗೂ ಕಾಮಗಾರಿ ಮಾತ್ರ ಆರಂಭಿಸದೆ ವಿಳಂಬ ಮಾಡುತ್ತಿದ್ದಾರೆ.

ನಗರದ ಕೌಲಬಜಾರ್ ಪ್ರದೇಶದ ಫಸ್ಟ್ ಗೇಟ್ ಬಳಿ ಈಗಾಗಲೇ ವಾಚ್ ಟವರ್‌ಗಾಗಿ ಸ್ಥಳ ಅಕ್ರಮಿಸಿಕೊಂಡು ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಸದ್ಯ ಟವರ್‌ಗೆ ಬಣ್ಣ ಹಾಗೂ ಯಾವ ಯಾವ ಮಾರ್ಗದ ಮೂಲಕ ಸಂಚಾರಿಸುವ ಬಗ್ಗೆ ಮಾರ್ಗಸೂಚಿಗಳನ್ನು ಅಳವಡಿಸಿಲ್ಲ ಸದ್ಯ ಈ ಕಾಮಗಾರಿಯೂ ಕೂಡ ಸ್ಥಗಿತಗೊಂಡಿದೆ. ಈಗಾಗಲೇ ಕೆಇಬಿ ವೃತ್ತದಲ್ಲಿ ಆಶ್ವರೂಢ ಬಸವೇಶ್ವರ ಪುತ್ಥಳಿ ಭೂಮಿಪೂಜೆ ನಡೆದಿದ್ದು ಆ ವೃತ್ತದ ಪ್ರಮುಖ ರಸ್ತೆಯ ಅಗಲೀಕರಣದ ನಡೆಯುತ್ತಿರುವುದರಿಂದ ಪೂರ್ಣಗೊಂಡ ಬಳಿಕ ಈ ವೃತ್ತದ ಕಾಮಗಾರಿ ಆರಂಭವಾಗಲಿದೆ.

ರೈಲು ಸೇತುವೆ ಕಾಮಗಾರಿ ವಿಳಂಬ : ಇಲ್ಲಿನ ಸುಧಾ ಕ್ರಾಸ್ ಬಳಿ ನೂರರು ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ರೈಲು ಮೇಲು ಸೇತುವೆ ಕಾಮಗಾರಿ ತುಸು ವೇಗ ಪಡೆದುಕೊಂಡಿದೆ. ಆದರೆ, ಎರಡು ಕಡೆ ಮೇಲ ಸೇತುವೆ ನಿರ್ಮಾಣವಾಗಲಿರುವುದರಿಂದ ಸಂಚಾರಕ್ಕೆ ಚಾಲನೆ ದೊರೆಯಬೇಕಾದರೆ ಇನ್ನೂ ಒಂದೂವರೆ ವರ್ಷ ಕಾಯಬೇಕಾದ ಅನಿವಾರ್ಯತೆಯಿದೆ. ಈ ವೃತ್ತದ ಮೂಲಕ ಪ್ರತಿಷ್ಠಿತ ಕಾಲೇಜು ಹಾಗೂ ಆಸ್ಪತ್ರೆಗಳಿದ್ದು ಸೂಕ್ತ ಸಮಯಕ್ಕೆ ತೆರಳಲು ಪರದಾಡಬೇಕಿದೆ.

ಅವೈಜ್ಞಾನಿಕ ವೃತ್ತಗಳ ಆರೋಪ : ಇಲ್ಲಿನ ವೃತ್ತಗಳಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ಅವೈಜ್ಞಾನಿಕದಿಂದ ಕೂಡಿವೆ. ಏಕೆಂದರೆ, ಸದ್ಯ ಜನಬೀಡ ಪ್ರದೇಶಗಳ ವೃತ್ತಗಳು ಆಗಿರುವುದರಿಂದ ನಿತ್ಯವೂ ವಾಹನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಆದ್ದರಿಂದ, ವೃತ್ತಗಳಿಂದ ವಾಹನಗಳು ನಾಲ್ಕು ಕಡೆ ಸಂಚಾರಿಸಲು ವಿಸ್ತಾರವಾದ ಸ್ಥಳ ಅವಕಾಶ ಕಲ್ಪಿಸಿ ವೃತ್ತ ನಿರ್ಮಾಣ ಮಾಡಬೇಕು. ಆದರೆ, ಸದ್ಯ ನಿರ್ಮಾಣವಾಗುತ್ತಿರುವ ಎಲ್ಲ ಕಡೆ ಪುತ್ಥಳಿ ಹಾಗೂ ಕ್ಲಾಕ್ ಟವರ್‌ಗೆ ಸ್ಥಳ ಒದಗಿಸಿದ್ದು ಸಾರ್ವಜನಿಕರಿಗೆ ಸಂಚರಿಸಲು ಅನುಕೂಲವಾಗುವಂತೆ ಸ್ಥಳ ಒದಗಿಸಿ ವೃತ್ತಗಳು ನಿರ್ಮಿಸಿಲ್ಲ. ಆದ್ದರಿಂದ, ವೃತ್ತಗಳು ನಿರ್ಮಾಣವಾಗಿ ಚಾಲನೆ ಸಿಕ್ಕರೂ ಟ್ರಾಫಿಕ್ ಸಮಸ್ಯೆ ಮಾತ್ರ ತಪ್ಪುವುದಿಲ್ಲ. ಏನೇ ಇರಲಿ, ವೃತ್ತಗಳ ನಿರ್ಮಾಣ ನಗರದ ಸೌಂದರ್ಯ ಹೆಚ್ಚಿಸಬೇಕು ವಿನಃ ಟ್ರಾಫಿಕ್ ಸಮಸ್ಯೆಯಾಗಬಾರದು ಎಂಬುದು ವಾಹನ ಸಂಚಾರರ ಅಭಿಪ್ರಾಯವಾಗಿದೆ.

ಕೋಟ್... ನಗರದ ವಿವಿಧ ವೃತ್ತಗಳಲ್ಲಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶಿಸಲಾಗಿದೆ. ಕೆಲ ದಿನಗಳಲ್ಲೇ ಎಲ್ಲ ವೃತ್ತಗಳ ಕಾಮಗಾರಿಗಳು ಪೂರ್ಣಗೊಳ್ಳಲಿವೆ.

- ಖಲೀಲ್ ಸಾಬ್, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net