ರಸ್ತೆಯ ಗುಂಡಿ ಮುಚ್ಚಿದ ಸಾರ್ವಜನಿಕರು : ನಗರ ಪಾಲಿಕೆ, ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ

06112022 bellary road repair
Published on

ಬಳ್ಳಾರಿ: ವಾಯ್ಸ ಆಫ್ ಬಳ್ಳಾರಿ ಎಂಬ ಹೆಸರಲ್ಲಿ ಒಟ್ಟಾಗಿ ಸೇರಿದ ಇಲ್ಲಿನ ಗಣ್ಯ ನಾಗರಿಕರು ಟ್ರ್ಯಾಕ್ಟರ್ ಮೂಲಕ ಎಂ ಸ್ಯಾಂಡ್, ಜಲ್ಲಿಕಲ್ಲನ್ನು ತರಿಸಿ ತಾವೇ ಸ್ವತಃ ಕಾರ್ಮಿಕರಂತೆ ಗುಂಡಿಗಳನ್ನು ಮುಚ್ಚುವ ಮೂಲಕ ಭಾನುವಾರ ವಿನೂತನವಾಗಿ ಜನಪ್ರತಿನಿಧಿಗಳ ವಿರುದ್ಧ್ದ ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿನ ಪೈಪ್ ಜೋಡಣೆ ಸೇರಿದಂತೆ ಮಳೆ ಮತ್ತಿತರ ಕಾರಣಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ನಗರದ ಪ್ರಮುಖ ರಸ್ತೆಗಳಲ್ಲಿ ಡಾಕ್ಟರ್, ಚಾರ್ಟೆಡ್ ಅಕೌಂಟೆಂಟ್, ವಕೀಲರು, ಉದ್ಯಮಿ, ವ್ಯಾಪಾರಿಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ಇತರರು ಬೀದಿಗಿಳಿದು ಕನಕದುರ್ಗಮ್ಮ ದೇವಸ್ಥಾನದ ಬಳಿ ಗುಂಡಿಗಳನ್ನು ಮುಚ್ಚಿದರು. ಸಾರ್ವಜನಿಕರು ತಾವು ಮಾತ್ರ ಬಾರದೆ ಜತೆಗೆ ಮಕ್ಕಳನ್ನು ಪ್ರತಿಭಟನೆಗೆ ಕರೆತಂದಿದ್ದರು. ರಸ್ತೆ ಎಂಬ ಧೂಳು, ಆರೋಗ್ಯ ಹಾಳು ಇತ್ಯಾದಿ ಘೋಷಣೆಗಳನ್ನು ಕೂಗಿದರು.

ಕೆಲ ರಸ್ತೆ ಅಭಿವೃದ್ಧಿ ಹೆಸರಲ್ಲಿ ಒಡೆದರೆ ಮತ್ತೆ ಕೆಲ ರಸ್ತೆಗಳು ನಿರ್ವಹಣೆ ಇಲ್ಲದೇ ಸೊರಗಿವೆ. ಹೀಗಾಗಿ ಜನರಿಗೆ ಅಸ್ತಮಾ, ಡೆಂೆ ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಸಾರ್ವಜನಿಕರು ಈ ಸಂದರ್ಭ ಆರೋಪಿಸಿದರು. ಜನರ ಆರೋಗ್ಯ ಕಾಪಾಡಿ ಎಂದು ಹೋರಾಟಗಾರರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಮುಖಂಡ ಡಾ.ಬಿ.ಜಿ.ಸುಂದರ್, ವಕೀಲರ ಸಂಘದ ಅಧ್ಯಕ್ಷ ಯರೇಗೌಡ ಸೇರಿದಂತೆ ಪ್ರಮುಖರು ಈ ವಿನೂತನ ಹೋರಾಟದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಎಇಇಯಿಂದ ಗುಂಡಿ ಮುಚ್ಚಿಸಿದ ಸಾರ್ವಜನಿಕರು: ರಸ್ತೆಯ ಗುಂಡಿಗಳಿಂದ ತೊಂದರೆ ಅನುಭವಿಸಿದ್ದ ಸಾರ್ವಜನಿಕರು ರಸ್ತೆಗೆ ಬಂದು ಜಲ್ಲಿ, ಮಣ್ಣು ಹಾಕುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ನಗರ ಪಾಲಿಕೆ ಎಇಇ ಖಾಜಾ ಮೋಹಿದ್ದಿನ್ ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭ ಕುಪಿತಗೊಂಡಿದ್ದ ಸಾರ್ವಜನಿಕರು ‘ನೀವು ಮಾಡಬೇಕಾದ ಕೆಲಸ ನಾವು ಮಾಡುತ್ತಿದ್ದೇವೆ. ನೀವು ನಮ್ಮೊಂದಿಗೆ ಕೆಲಸ ಮಾಡಿ’ ಎಂದವರೆ ಮಣ್ಣಿನ ಪುಟ್ಟಿಯನ್ನು ಎಇಇ ಕೈಕೊಟ್ಟು ಗುಂಡಿಯನ್ನು ಮುಚ್ಚಿಸಿದರು. ಜತೆಗೆ ಕಾಕತಾಳೀಯ ಎಂಬಂತೆ ಸಾರ್ವಜನಿಕರು ಗುಂಡಿ ಮುಚ್ಚಿ ಸರಿಪಡಿಸಿದ ರಸ್ತೆಯ ಮೇಲೆಯೇ ಜಿಲ್ಲಾ ಉಸ್ತುವಾರಿ ಸಚಿವರ ಕಾರು ತೆರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net