ವೇಗ ಪಡೆದ ರಿಂಗ್ ರಸ್ತೆ ಕಾಮಗಾರಿ

Published on

ಬಳ್ಳಾರಿ ; ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯು ವೇಗ ಪಡೆದಿದ್ದು ಇನ್ನೂ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಜಿಲ್ಲಾ ಉಸ್ತುವಾರಿಯಾದ ಸಂದರ್ಭದಲ್ಲಿ ತಾಲೂಕಿನ ಅಲ್ಲಿಪುರ ಗ್ರಾಮದ ಹೊರವಲಯದಿಂದ ಆಲದಹಳ್ಳಿ, ಗುಗ್ಗರಹಟ್ಟಿ ಮಾರ್ಗವಾಗಿ ಅನಂತಪುರ ರಸ್ತೆಯವರಗೆ ಅರ್ಧ ರಿಂಗ್ ರಸ್ತೆ ಪೂರ್ಣಗೊಂಡಿತ್ತು. ಬಳಿಕ, ಅಕ್ರಮ ಗಣಿಗಾರಿಕೆ ಆರೋಪದಡಿ ಜಿ.ಜನಾರ್ದನರೆಡ್ಡಿ ಜೈಲು ಸೇರಿದ ಬಳಿಕ ಇನ್ನುಳಿದ ಕಾಮಗಾರಿ ಸ್ಥಗಿತಗೊಂಡಿತು. ಕಳೆದ ಹದಿನೈದು ವರ್ಷದಲ್ಲಿ ಹಲವು ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಬದಲಾವಣೆಯಾದರೂ ಯಾವ ಜನಪ್ರತಿನಿಧಿ ಕೂಡ ಇನ್ನುಳಿದ ರಿಂಗ್ ರಸ್ತೆ ನಿರ್ಮಾಣದ ಬಗ್ಗೆ ಗಮನಹರಿಸಲಿಲ್ಲ. ಆದ್ದರಿಂದ, ಹೊಸಪೇಟೆ, ಸಿರಗುಪ್ಪ ಹಾಗೂ ಆಂಧ್ರದ ಕಡೆಗೆ ಸಂಚಾರಿಸಬೇಕಾದ ಬೃಹತ್ ವಾಹನಗಳು ನಗರದಲ್ಲಿ ಸಂಚಾರಿಸುವುದರಿಂದ ಅಪಘಾತ ಸಂಭವಿಸಿ ಹಲವರು ಮೃತಪಟ್ಟಿರುವ ಘಟನೆಗಳು ನಡೆದಿವೆ. ಇದಲ್ಲದೆ, ನಗರದಲ್ಲಿ ವಾಹನಸವಾರರು ಸಂಚಾರಿಸಲು ನಿತ್ಯವೂ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ.

280 ಕೋಟಿ ರೂ. ಅನುದಾನ : ಸದ್ಯ ಅಲ್ಲಿಪುರ ಹೊರವಲಯದಿಂದ ಸಿರಗುಪ್ಪ, ತಾಳೂರು ಹಾಗೂ ಮೋಕಾ ರಸ್ತೆಯ ಮಾರ್ಗದ ರಿಂಗ್ ರಸ್ತೆಯ ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೆಲ ತಿಂಗಳ ಹಿಂದೆ ಆರಂಭಗೊಳಿಸಿದ್ದು ಅನಂತಪುರ ರಸ್ತೆಗೆ ಪೂರ್ಣಗೊಳ್ಳಲಿದೆ. ಒಟ್ಟಾರೆ 13 ಕಿ.ಮೀ. ವ್ಯಾಪ್ತಿಯ ರಸ್ತೆಗೆ ಒಟ್ಟಾರೆ 280 ಕೋಟಿ ರೂ. ಅನುದಾನ ವ್ಯಯಿಸಲಾಗುವುದು. ಈಗಾಗಲೇ ರಸ್ತೆಗೆ ಅಗತ್ಯವಿರುವ ಭೂ ಮಾಲೀಕರ ಜತೆ ಚರ್ಚಿಸಿ ರಸ್ತೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ, ರಸ್ತೆಯ ನಿರ್ಮಾಣದ ಕಚ್ಛಾ ವಸ್ತುಗಳನ್ನು ಸಾಗಣೆ ಹಾಗೂ ಲಾರಿಗಳ ಸಂಚಾರಕ್ಕೆ ಸಮೀಪದಲ್ಲಿಯೇ ಸರ್ವಿಸ್ ರಸ್ತೆಯನ್ನು ಕೂಡ ನಿರ್ಮಿಸಿಕೊಂಡಿದೆ. ಇದರಿಂದ, ಸಮೀಪದ ಜಮೀನುಗಳಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಿದೆ. ಇದಲ್ಲದೆ, ಈ ರಿಂಗ್ ರಸ್ತೆ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ನಗರಕ್ಕೆ ತಲುಪುವ ಪ್ರಮುಖ ರಸ್ತೆಗಳು ಹಾದುಹೋಗಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ಆಡಚಣೆಯಾಗದಂತೆ ಆರಂಭದಲ್ಲಿಯೇ ಮೇಲಸೇತುವೆಗಳನ್ನು ನಿರ್ಮಿಸಲು ಮುಂದಾಗಿದೆ. ಕಾಮಗಾರಿ ವರ್ಷಕ್ಕೂ ಅಧಿಕ ತಿಂಗಳು ಕಳೆದರೂ ಈ ಪ್ರಮುಖ ರಸ್ತೆಗಳ ಸಂಚಾರಕ್ಕೆ ಅನುಕೂಲವಾಗಲಿದೆ.

ಅಪಘಾತ ತಪ್ಪಲಿದೆ : ಕಳೆದ ಕೆಲ ವರ್ಷಗಳಿಂದ ಅರೆಬರೆ ರಿಂಗ್ ರಸ್ತೆಯಿಂದ ಬೃಹತ್ ವಾಹನಗಳು ರಾತ್ರಿ ಒಂಬತ್ತ ಗಂಟೆ ನಂತರ ನಗರದಿಂದ ಸಂಚಾರಿಸುತ್ತಿದ್ದವು. ಇದರಿಂದ, ನಗರದ ನಿವಾಸಿಗಳು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದರು. ಕೆಲವೊಂದು ಬಾರಿ ಪಾದಚಾರಿಗಳಿಗೆ ಲಾರಿಗಳು ಡಿಕ್ಕಿ ಹೊಡೆದ ಅಪಘಾತ ಘಟನೆಗಳು ಸಂಭವಿಸಿವೆ. ಇದಲ್ಲದೆ, ಬೃಹತ್ ವಾಹನಗಳ ಸಂಚಾರದಿಂದ ತಿಂಗಳಿಗೊಮ್ಮೆ ರಸ್ತೆ ದುರಸ್ತಿ ಮಾಡಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಎದುರಾಗಿತ್ತು. ಅಲ್ಲದೆ, ಬೃಹತ್ ವಾಹನಗಳು ಸಂಚಾರಿಸಿದ ವೇಳೆ ಕೆಲವೊಮ್ಮೆ ಸಂಚಾರ ಠಾಣೆ ಅಧಿಕಾರಿಗಳಿಗೆ ದಂಡ ಪಾವತಿಸಿ ಚಲಿಸಬೇಕಿತ್ತು. ಬೆಳಗಿನ ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಸುಸ್ತಾಗಿದ್ದರು. ಈ ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಯು ಕೆಲವೇ ತಿಂಗಳಲ್ಲಿ ಪೂರ್ಣಗೊಂಡರೆ ಹಲವು ವರ್ಷಗಳಿಂದ ಕಾದಿದ್ದ ಜನರ ಬೇಡಿಕೆ ಈಡೇರಿದಂತೆಯಾಗುತ್ತಿದೆ.

ರೈತರ ಆರೋಪ : ನಗರದ ಹೊರವಲಯದ ಕೃಷಿ ಭೂಮಿ ಪ್ರದೇಶದಲ್ಲಿ ರಿಂಗ್ ರಸ್ತೆ ಹಾದು ಹೋಗಿರುವುದರಿಂದ ಸುತ್ತಲಿನ ರೈತರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಕೆಲ ತಿಂಗಳಿಂದ ರಸ್ತೆಯ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರದಿಂದ ಬೆಳೆಯ ಮೇಲೆ ಧೂಳು ಹರಡಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಂದಿಲ್ಲ. ಆದ್ದರಿಂದ, ಕೂಡಲೇ ಕೆಲ ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಿ ಬೆಳೆ ಬೆಳೆಯಲು ಅನುಕೂಲ ಮಾಡಬೇಕು ಎಂಬುದು ರಸ್ತೆಯ ಸುತ್ತಲಿನ ಜಮೀನು ಮಾಲೀಕರ ಒತ್ತಾಯವಾಗಿದೆ.

ಕೋಟ್... ಜಿಲ್ಲೆಯ ರಿಂಗ್ ರಸ್ತೆಯ ಕಾಮಗಾರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿದೆ. 2026 ಆಗಸ್ಟ್ ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.

- ಅತುಲ್, ಡೆಪ್ಯುಟಿ ಮ್ಯಾನೇಜರ್, ಎನ್‌ಎಚ್‌ಎಐ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net