

| ಅಶೋಕ ನೀಮಕರ್ ಗಂಗಾವತಿ
ವಿಜಯನಗರ ಪ್ರತ್ಯೇಕ ಜಿಲ್ಲೆಯಾದ ಬಳಿಕ ಬಳ್ಳಾರಿ ಜಿಲ್ಲೆಯ ರಾಜಕೀಯಕ್ಕೆ ಬೇಲಿ ಹಾಕಿದಂತಾಗಿದೆ. ಬಳ್ಳಾರಿ ಮತ್ತು ವಿಜಯನಗರಕ್ಕೆ ತಲಾ ಐದು ಕ್ಷೇತ್ರಗಳು ಹಂಚಿಕೆಯಾಗಿವೆ. ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಹಾಗೂ ಎರಡರಲ್ಲಿ ಬಿಜೆಪಿ ಶಾಸಕರಿದ್ದಾರೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಹಿಡಿಯಲು ಅವಿಭಜಿತ ಬಳ್ಳಾರಿ ಜಿಲ್ಲೆಯ ಪಾತ್ರ ಪ್ರಮುಖವಾಗಿತ್ತು. ಅದಕ್ಕೆ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ.ಶ್ರೀರಾಮುಲು ಜೋಡಿ ಕಾರಣರಾಗಿದ್ದರು. 14 ವರ್ಷಗಳ ಬಳಿಕವೂ ಜಿಲ್ಲೆಯಲ್ಲಿ ಬಿಜೆಪಿ, ರೆಡ್ಡಿ-ರಾಮುಲು ನೆರಳಿಂದ ಹೊರಬಂದು ಸ್ವಂತ ವರ್ಚಸ್ಸು ಬೆಳೆಸಿಕೊಂಡಿಲ್ಲ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ನಲ್ಲಿ ಟಿಕೆಟ್ ಪೈಪೋಟಿ ಹೆಚ್ಚಾಗಿದೆ. ಐದು ಕ್ಷೇತ್ರಗಳ ಪೈಕಿ ನಾಲ್ಕು ಪರಿಶಿಷ್ಟ ಪಂಗಡಕ್ಕೆ ಹಾಗೂ ಒಂದು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ.