ವರದಿ ಬಹಿರಂಗಪಡಿಸಿ

Published on

ಬಳ್ಳಾರಿ : ಕಾಂತರಾಜು ಆಯೋಗ ವರದಿಯನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಉಪಾಧ್ಯಕ್ಷ ಕೆ. ಹನುಮಂತಪ್ಪ ಒತ್ತಾಯಿಸಿದರು.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಏಕಾಏಕಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಕುರಿತಂತೆ ಅಸಮರ್ಥನೀಯ ಹಾಗೂ ಅತಾರ್ಕಿಕ ದತ್ತಾಂಶಗಳನ್ನು ಆಧರಿಸಿ ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು. 2011ರ ಜನಗಣತಿಯ ಅಂಕಿ ಅಂಶಗಳನ್ನು ಪರಿಗಣಿಸದೇ ರಾಜ್ಯದಲ್ಲಿ ಇತ್ತೀಚೆಗಿನ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾಂತರಾಜು ಆಯೋಗದ ವರದಿ ಕೂಡಲೇ ಬಹಿರಂಗಗೊಳಿಸಿ ಸದರಿ ವರದಿಯಲ್ಲಿರುವ ದತ್ತಾಂಶಗಳನ್ನು ಪರಿಗಣಿಸಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳ ಪೈಕಿ 51 ಜಾತಿಗಳು ಗುರುತಿಸಲ್ಪಟ್ಟ ಅಲೆಮಾರಿ ಮತ್ತು ವಿಮುಕ್ತ ಸಮುದಾಯಗಳಾಗಿವೆ. ಸಾಮಾಜಿಕ ಹಿಂದುಳಿದಿರುವಿಕೆ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಮೀಸಲಾತಿ ಪ್ರಾತಿನಿಧ್ಯವನ್ನು ಕುರಿತಾದ ಸಮರ್ಥನೀಯ ದತ್ತಾಂಶಗಳನ್ನು ಕ್ರೋಢಿಕರಿಸಿ ವೈಜ್ಞಾನಿಕವಾಗಿ ವಿಶ್ಲೇಷಿಸಲು ಪರಿಣಿತಿಯುಳ್ಳ ತಜ್ಞರ ಸಮಿತಿ ಕೂಡಲೇ ರಚಿಸಬೇಕು. ತಜ್ಞರ ಸಮಿತಿಯ ವರದಿ ಪಡೆದು ಸಮುದಾಯಗಳ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಚಿಂತಕರೊಂದಿಗೆ ಸಮಾಲೋಚಿಸಿ ಬಳಿಕ ಪರಿಶಿಷ್ಟ ಜಾತಿ ಒಳಮೀಸಲಾತಿಯ(ವರ್ಗೀಕರಣ) ತಿರ್ಮಾನ ಕೈಗೊಳ್ಳಬೇಕು ಎಂದರು.

ಪ್ರಮುಖರಾದ ರಮಣಪ್ಪ ಭಜಂತ್ರಿ, ಶಂಕರ ಬಂಡೆ ವೆಂಕಟೇಶ, ಶ್ರೀನಿವಾಸ, ಕೆ. ರಂಗಸ್ವಾಮಿ, ಕೆ. ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net