ಹಕ್ಕುಗಳ ರಕ್ಷಣೆ ಅಧಿಕಾರಿಗಳ ಜವಾಬ್ದಾರಿ

Published on

ಬಳ್ಳಾರಿ : ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಹಾಗೂ ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ನೈತಿಕ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್‌ಭಟ್ ಹೇಳಿದರು.

ಇಲ್ಲಿನ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದರು.

ಸರ್ಕಾರವು ವಿವಿಧ ಇಲಾಖೆಗಳಿಂದ ನೀಡುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕು. ಇಲ್ಲದಿದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತಾಗುತ್ತದೆ. ಮಾನವ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾಯುವುದು ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದರು.

ಕಾನೂನಿನಡಿ ಎಲ್ಲ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನೊಂದ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಮೇಲೆ ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥ ಪಡಿಸುವಾಗ ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ತನಿಖೆ ನಡೆಸಲಾಗುವುದು. ದೂರುಗಳು ಬಂದಾಗ ಸೂಕ್ತ ಮಾಹಿತಿ ಒದಗಿಸಬೇಕು. ಇನ್ನಷ್ಟು ದೂರುಗಳಿಗೆ ಆಸ್ಪದ ನೀಡದೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ರಾಜ್ಯದ ವಿವಿಧೆಡೆ ಗ್ರಾಮಗಳಲ್ಲಿ ಈವರೆಗೂ ಅನಿಷ್ಠ ಪದ್ಧತಿಗಳನ್ನು ಅನುಸರಿಸುವುದು ಕಂಡುಬರುತ್ತಿದ್ದು, ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಿಂಬಿಸುತ್ತದೆ. ಮಾನವ ಹಕ್ಕುಗಳನ್ನು ಸಂರಕ್ಷಿಸಲು ಬೇಕಾಗಿರುವುದು ಮುಖ್ಯವಾಗಿ ಮಾನವೀಯತೆ. ಹಾಗಾಗಿ ಅಧಿಕಾರಿಗಳು ಮಾನವೀಯತೆ ಹೊಂದಬೇಕು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net