ಬಳ್ಳಾರಿ : ಯುದ್ಧದ ಕರಿ ನೆರಳು ನಮ್ಮ ಮೇಲಿದೆ. ಪಾಕಿಸ್ತಾನದ ಗಡಿ ರಾಜ್ಯಗಳಲ್ಲಿ ಜನ ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಯಾರು ಕೂಡ ನೆಮ್ಮದಿಯಿಂದ ಇರಬಾರದು. ಯುದ್ಧದ ಸನ್ನಿವೇಶಕ್ಕೆ ಬರಹಗಾರರಾದವರು ತೀವ್ರವಾಗಿ ಸ್ಪಂದಿಸಬೇಕು ಎಂದು ಹಿರಿಯ ಲೇಖಕ ಜಿ.ಪಿ.ಬಸವರಾಜ ಅಭಿಪ್ರಾಯಪಟ್ಟರು.
ನಗರದ ಜ್ಞಾನಮೃತ ಕಾಲೇಜು ಸಭಾಂಗಣದಲ್ಲಿ ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದ ಸ್ವರೂಪ ಹಾಗೂ ಸಂವೇದನೆ -ಮಾತುಕತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಕಣ್ಣೆದುರಿಗೆ ಎರಡು ಭಾರತಗಳಿವೆ. ಮೊದಲನೇ ಭಾರತದಲ್ಲಿ ಅಂತರ್ಜಾಲದ ಎಲ್ಲ ಸೌಕರ್ಯಗಳಿವೆ. ಎರಡನೇ ಭಾರತದಲ್ಲಿ ಬಡತನ, ಅನಕ್ಷರತೆ, ಅಸಹಾಯಕತೆಗಳಿಗೆ ಒಳಗಾದ ಜನಸಮುದಾಯವಿದೆ. ಇಲ್ಲಿ ಗುರುತು ಕೂಡ ಸಿಗದ ಅನೇಕ ಸಮುದಾಯಗಳಿವೆ. ಇವರಿಗೆ ಊರು, ಮನೆ, ಉದ್ಯೋಗ, ಶಿಕ್ಷಣವಿಲ್ಲ. ಇಂತಹ ಭಾರತಕ್ಕೆ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ ಕೊಡಬೇಕೆಂದು ಅಂಬೇಡ್ಕರ್ ಆಲೋಚಿಸಿದ್ದರು ಎಂದು ವಿಶ್ಲೇಷಿಸಿದರು.
ಬರಹಗಾರರು ಪ್ರಧಾನವಾಗಿ ಅಸಹಾಯಕತೆಯಿಂದ ನರಳುತ್ತಿರುವ ಸಮುದಾಯಗಳ ಕಡೆ ಹೃದಯ ಮತ್ತು ತೆರೆದ ಕಣ್ಣಿನಿಂದ ನೋಡುವಂತಾಗಬೇಕು. ಆಗ ದೇಶದ ಜನ ಸಮುದಾಯಗಳ ತಲ್ಲಣಗಳು ಅರ್ಥವಾಗಲು ಸಾಧ್ಯ. ನಮ್ಮ ಬರಹಕ್ಕು ಶಕ್ತಿ ಬರಲು ಸಾಧ್ಯ ಎಂದರು.
ಕವಿ ಆರಿಫ್ ರಾಜ ಮಾತನಾಡಿ, ಕನ್ನಡದ ಎಷ್ಟೋ ಪ್ರಮುಖ ಕೃತಿಗಳು ಈ ಹೊತ್ತಿಗೂ ಬೇರೆ ಭಾಷೆಗೆ ದಾಟಿಲ್ಲ. ನಮ್ಮ ಸಂವೇದನೆ, ನಿರೂಪಣೆಗಳ ಹಿಂದೆ ಯಾರಾದರೂ ಇದ್ದಾರಾ?. ನಮ್ಮ ಅನನ್ಯತೆಯನ್ನು ದಾಖಲಿಸಲು ಹಿಂಜರಿಕೆ ಕಾಡುತ್ತಿದೆ. ಈ ತೆರನಾದ ಅನೇಕ ಪ್ರಶ್ನೆಗಳು ಇಂದು ಎದುರಾಗುತ್ತಿವೆ. ಈ ವೇದಿಕೆ ಕನ್ನಡದ ಬರಹಗಾರರಿಗೆ ಅಷ್ಟೇ ಸೀಮಿತವಾಗದೆ, ದೇಶದ ವಿವಿಧ ಭಾಗದ ಲೇಖಕರನ್ನು ಒಂದೆಡೆ ಸೇರಿಸಿ ಮುಕ್ತವಾಗಿ, ಆರೋಗ್ಯಕರವಾಗಿ ಚರ್ಚಿಸಲು ಸಹಕಾರಿಯಾಗಲಿದೆ ಎಂದರು.
ಪ್ರಮುಖ ಲೇಖಕರಾದ ದಸ್ತಗೀರಸಾಬ್ ದಿನ್ನಿ, ವೀರೇಂದ್ರ ರಾವಿಹಾಳ್, ನಾಗರಾಜ ಬಸರಕೋಡು, ಎಂ.ಬಸವರಾಜ, ಲತಾ ಗುತ್ತಿ, ಟಿ.ಎಸ್. ಗೊರವರ, ಚೀಮನಹಳ್ಳಿ ರಮೇಶಬಾಬು, ತುಂಬಾಡಿ ರಾಮಯ್ಯ, ಪದ್ಮನಾಭ ಭಟ್, ರಾಜೇಂದ್ರ ಪ್ರಸಾದ್, ಸುಮಿತ್ ಮೇತ್ರಿ, ಶೃತಿ ಬಿ. ಇದ್ದರು.
ಕೋಟ್.. ನಾಡಿನ ಮೂಲೆ ಮೂಲೆಯಿಂದ ಬಂದ ಬರಹಗಾರರು ಇಲ್ಲಿ ತಮ್ಮ ಅನುಭವ, ಸಂವೇದನೆಗಳನ್ನು ಹಂಚಿಕೊಳ್ಳುವುದರ ಜತೆಗೆ ಪ್ರೀತಿಯಿಂದ ಬೆರೆಯುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ನಿತ್ಯ ನಡೆಯುವ ವಿದ್ಯಮಾನಗಳ ಬಗೆಗೆ ಸಾಂಸ್ಕೃತಿಕ ಮುಖಾಮುಖಿ ನಡೆಯುತ್ತಿರುವುದು ಸಂತೋಷದ ಸಂಗತಿ.
- ಡಾ. ಅರವಿಂದ ಪಟೇಲ್, ಗೌರವಾಧ್ಯಕ್ಷ, ಸಂಗಂ ಟ್ರಸ್ಟ್ .