ತಿಂಗಳು ಕಳೆದರೂ ವರದಿ ಕೈ ಸೇರಿಲ್ಲ

Published on

ಬಳ್ಳಾರಿ ; ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಕುಲಪತಿ ಸಹಿ ನಕಲು ಮಾಡಿ ಎರಡು ಸಾವಿರಕ್ಕೂ ಅಧಿಕ ಘಟಿಕ ಪ್ರಮಾಣಪತ್ರಗಳನ್ನು ವಿತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ತಿಂಗಳೂ ಕಳೆದರೂ ಪ್ರಾಥಮಿಕ ವರದಿ ನೀಡದೆ ಇರುವುದು ಅನುಮಾನ ಮೂಡಿಸಿದೆ.

ವಿವಿಯು ಕಳೆದ ಕೆಲ ತಿಂಗಳಿಂದ ಸದಾ ಒಂದು ವಿವಾದಲ್ಲಿ ಸಿಲುಕಿಕೊಂಡು ಹೆಸರುವಾಸಿಯಾಗಿದೆ. ಅದರಂತೆ, ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದ ವಿದ್ಯಾರ್ಥಿಗಳಿಗೆ ನಕಲು ಘಟಕೋತ್ಸವ ಪ್ರಮಾಣ ಪತ್ರದ ವಿತರಣೆ ಸಂಬಂಧಿಸಿದಂತೆ ಕುಲಸಚಿವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನಿಪಕ್ಷಪಾತವಾಗಿ ತನಿಖೆ ನಡೆಸಿ ತಿಂಗಳಳೊಗೆ ಕುಲಪತಿಗಳಿಗೆ ವರದಿ ಒಪ್ಪಿಸುವಂತೆ ಸೂಚಿಸಲಾಗಿತ್ತು. ಆದರೆ, ಈ ವರೆಗೆ ವರದಿ ಕೈ ಸೇರದೆ ಇರುವುದು ಕೆಲವರು ಅಕ್ರಮವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ.

ಏನಿದು ವಿವಾದ : ವಿಎಸ್‌ಕೆ ವಿವಿ ಹಳೆಯ ವಿದ್ಯಾರ್ಥಿನಿಯೊಬ್ಬರು ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ವಿವಿಯ ಗುತ್ತಿಗೆ ನೌಕರರೊಬ್ಬರನ್ನು ಸಂಪರ್ಕಿಸಿದ್ದರು. ಪ್ರಮಾಣ ಪತ್ರಪಡೆಯಲು ಬ್ಯಾಂಕ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸದೆ ಗುತ್ತಿಗೆ ನೌಕರನ ಮನವಿಯಂತೆ ಆತನ ಖಾತೆಗೆ ಜಮಾ ಮಾಡಿದ್ದರು. ಕೆಲ ದಿನಗಳಲ್ಲೆ ವಿದ್ಯಾರ್ಥಿನಿಗೆ ಪ್ರಮಾಣಪತ್ರ ವಿತರಣೆಯಾಗಿದೆ. ಶುಲ್ಕ ಪಾವತಿಯ ರಸೀದಿ ನೀಡುವಂತೆ ವಿದ್ಯಾರ್ಥಿನಿ ಪಟ್ಟು ಹಿಡಿದು ವಿವಿಯ ಆಡಳಿತ ಕಚೇರಿಗೆ ಆಗಮಿಸಿದ್ದರು. ಈ ವೇಳೆ ತನಗೆ ವಿತರಿಸಿದ ಘಟಿಕೋತ್ಸವ ಪ್ರಮಾಣ ಪತ್ರ ನಕಲಿ ಎಂಬುದು ತಿಳಿದಿತ್ತು. ಕೂಡಲೇ ಎಚ್ಚೇತ್ತುಕೊಂಡ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕುಲಸಚಿವರ ನೇತೃತ್ವದಲ್ಲಿ ತಂಡ ರಚಿಸಿ ಕಳೆದ ಹತ್ತು ವರ್ಷಗಳಲ್ಲಿ ವಿವಿಯಿಂದ ವಿತರಣೆಯಾದ ಪ್ರಮಾಣ ಪತ್ರಗಳಲ್ಲಿ ಎಷ್ಟು ನಕಲಿ ಎಂಬುದನ್ನು ತಿಳಿಯಲು ಆದೇಶಿಸಿದ್ದರು. ತಂಡವು ಹತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಘಟಿಕೋತ್ಸವ ಪ್ರಮಾಣ ಪತ್ರಗಳು ನಕಲಿ ಹಾಗೂ ಪ್ರಭಾರಿ ಕುಲಪತಿಗಳ ಅಧಿಕಾರದಲ್ಲಿ ನಕಲಿ ಶೀಲ್‌ಗಳ ಬಳಸಿ ವಿತರಿಸಲಾಗಿದೆ ಎಂದು ಪ್ರಾಥಮಿಕ ವರದಿಯನ್ನು ಕುಲಪತಿಗಳಿಗೆ ಸಲ್ಲಿಸಿತ್ತು. ಇದರನ್ವಯ 2025ರ ಮಾ.28ರಂದು ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣದಲ್ಲಿ ಯಾರು ಅಕ್ರಮ ಎಸಗಿದ್ದಾರೆ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ನಿವೃತ್ತ ಕುಲಪತಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲು ಆಗ್ರಹಿಸಿದ್ದರು. ಇದಕ್ಕೆ ಮಣಿದ ಕುಲಪತಿಗಳು ಮೊದಲು ಕುಲಸಚಿವ, ಹಣಕಾಸು, ಭೋದಕತೇರ ಸಿಬ್ಬಂದಿ ಹಾಗೂ ಉಪನ್ಯಾಸಕರ ನೇತೃತ್ವದಲ್ಲಿ ತಂಡದ ಪ್ರಾಥಮಿಕ ವರದಿ ಬಳಿಕ ನಿವೃತ್ತ ಕುಲಪತಿ ತಂಡ ನೇಮಿಸಲಾಗುವುದು ಎಂದು ತಿಳಿಸಿದ್ದರು. ಆದರೆ, ತನಿಖಾ ತಂಡ ರಚಿಸಿ ಒಂದು ತಿಂಗಳೂ ಕಳೆದರೂ ಈವರೆಗೂ ವರದಿ ನೀಡಿಲ್ಲ. ಇನ್ನೂ ನಿ. ಕುಲಪತಿ ತಂಡವು ತನಿಖೆ ನಡೆಸುವ ವೇಳೆ ಸಾಕ್ಷೃಹಾಗೂ ಆಧಾರಗಳು ನಾಶವಾಗಲಿವೆ ಎಂಬ ಅನುಮಾನವಿದೆ ಎಂದು ವಿವಿ ಮಾಜಿ ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದರು.

ವರದಿಗಳೆ ಇಲ್ಲ : ನಕಲಿ ಪ್ರಮಾಣ ಪತ್ರ ವಿತರಣೆ ವಿವಾದಕ್ಕೂ ಮುನ್ನ ವಿವಿಯಲ್ಲಿ ಮೀಟರ್ ಬಡ್ಡಿ ದಂಧೆ ವ್ಯವಹಾರ, ಬಿ.ಇಡಿ ಕಾಲೇಜುಗಳು ಆನ್‌ಲೈನ್‌ನಲ್ಲಿ ಹೆಚ್ಚು ಅಂಕ ನಮೂದು, ಅಂಕಪಟ್ಟಿ ಕಾಗದ ಖರೀದಿಯಲ್ಲಿ ಅಕ್ರಮ, ಬಿ.ಇಡಿ ಫಲಿತಾಂಶ ಪ್ರಕಟಿಸದೆ ವಿಳಂಬ ಸೇರಿದಂತೆ ಹಲವು ವಿವಿ ವಿರುದ್ಧ ಆರೋಪಗಳು ಕೇಳಿ ಬಂದ್ದಿದವು. ಆದರೆ, ಇದಕ್ಕೆ ವಿವಿಯು ಮೀಟರ್ ಬಡ್ಡಿ ದಂಧೆಯಲ್ಲಿ ಆರೋಪಿಯಾಗಿದ್ದ ವಿವಿಯ ಪ್ರಾಧ್ಯಾಪಕರ ವಿರುದ್ದ ವಿಚಾರಣೆ ನಡೆಯುತ್ತಿದೆ. ಅಂಕಪಟ್ಟಿ ಕಾಗದ ಖರೀದಿಯಲ್ಲಿ ಸರ್ಕಾರದ ನಿಗದಿ ಮಾಡಿದ ಬೆಲೆಯಲ್ಲಿ ಖರೀದಿಸಲಾಗಿದೆ. ಬಿ.ಇಡಿ ಕಾಲೇಜುಗಳಿಗೆ ದಂಡ ವಿಧಿಸಿ ಫಲಿತಾಂಶ ಬಿಡುಗಡೆಗೊಳಿಸಲಾಗಿದೆ ಎಂದು ವಿವಿ ಕುಲಪತಿ ವಿಜಯವಾಣಿಗೆ ತಿಳಿಸಿದರು. ಆದರೆ, ಈ ಎಲ್ಲ ತನಿಖೆಗಳು ನಿಪಕ್ಷಪಾತವಾಗಿ ನಡೆದಿಲ್ಲ ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಕೆಲ ಕೆಳ ದರ್ಜೆ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಮುಖ್ಯ ಆರೋಪಿಗಳನ್ನು ತಪ್ಪಿಸಲಾಗಿದೆ. ನಕಲಿ ಪ್ರಮಾಣ ಪತ್ರ ವಿತರಣೆಯಲ್ಲಿ ಕೋಟಿ ರೂ. ಅಧಿಕ ಅವ್ಯವಹಾರ ನಡೆದಿದೆ ಎಂದು ವಿವಿ ಪ್ರಾಧ್ಯಾಪಕರೊಬ್ಬರು ಆರೋಪಿಸಿದರು.

ಕೋಟ್.... ನಕಲಿ ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದಂತೆ ಕುಲಸಚಿವರ ನೇತೃತ್ವದಲ್ಲಿ ತಂಡ ರಚಿಸಿದ್ದು ವರದಿ ಸೇರಿದ ಬಳಿಕ ನಿ.ಕುಲಪತಿ ನೇತೃತ್ವದಲ್ಲಿ ಮತ್ತೊಮ್ಮೆ ತನಿಖೆ ನಡೆಸಲಾಗುವುದು. ಈವರೆಗೂ ಪ್ರಾಥಮಿಕ ವರದಿ ಕೈ ಸೇರಿಲ್ಲ.

- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ ವಿವಿ, ಬಳ್ಳಾರಿ.

ಕೋಟ್... ನಕಲಿ ಪ್ರಮಾಣ ಪತ್ರ ಕೂಲಂಕುಷವಾಗಿ ತನಿಖೆ ನಡೆಯುತ್ತಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ವರದಿ ಕುಲಪತಿಗಳ ಕೈ ಸೇರಲಿದೆ.

- ನಾಗರಾಜ, ಹಣಕಾಸು ಅಧಿಕಾರಿ, ವಿಎಸ್‌ಕೆ ವಿವಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net