ಬಳ್ಳಾರಿ : ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣ ಗುರುಗಳಲ್ಲಿ ಒಬ್ಬರು. ಇವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ ಎಂದು ಕಮ್ಮರಚೇಡು ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಶ್ರೀಕಲ್ಯಾಣ ಮಹಾಸ್ವಾಮೀಜಿ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೇಣುಕಾಚಾರ್ಯರು ಬಾಲ್ಯದಲ್ಲೇ ಭಕ್ತಿಯಿಂದ ಪರಿಪೂರ್ಣರಾಗಿದ್ದು, ಋಷಿಗಳ ಜತೆಯಲ್ಲಿ ನಿರಂತರ ಜ್ಞಾನಸಾಧನೆ ನಡೆಸಿ, ಶೈವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದವರು ಎಂದರು.
ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೂಲಕ ಅರಿತುಕೊಳ್ಳಬೇಕೆಂಬ ತತ್ವವನ್ನು ರೇಣುಕಾಚಾರ್ಯರು ಪ್ರತಿಪಾದಿಸಿದರು. ಅವಮಾನಿತ ವರ್ಗಗಳನ್ನು ಪ್ರೀತಿಸಿ, ಅವರಿಗೆ ತತ್ವಶಾಸ್ತದ ಮತ್ತು ಧಾರ್ಮಿಕ ಶಿಕ್ಷಣ ನೀಡಿದರು ಎಂದು ತಿಳಿಸಿದರು.
ಸಮಾನತೆ ಎಂಬ ತತ್ವಕ್ಕೆ ಮಹತ್ವ ನೀಡಿ, ಅದರಲ್ಲಿ ಎಲ್ಲ ವರ್ಣಗಳೂ ಸಮಾನವೆಂಬ ನಂಬಿಕೆಯನ್ನು ಹರಡಿದರು. ರೇಣುಕಾಚಾರ್ಯರ ಜೀವನ ಮತ್ತು ತತ್ವಗಳು ಶಿವಪುರಾಣ, ಬಸವಪುರಾಣ ಮತ್ತು ಇತರ ಶೈವ ಪುರಾಣಗಳಲ್ಲಿ ವಿವರಿಸಲಾಗಿದೆ. ಇವರ ತತ್ವಗಳು ಇಂದು ಸಮಾಜದ ಸಮಾನತೆ, ಧಾರ್ಮಿಕ ಸಮರಸತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿದೀಪಗಳಾಗಿವೆ ಎಂದು ಬಿಂಬಿಸಿದರು.
ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದ ಐವರು ಗಣ್ಯರನ್ನು ಸನ್ಮಾನಿಸಲಾಯಿತು. ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು.