ಬಳ್ಳಾರಿ : ರಾಜ್ಯ ಸರ್ಕಾರದಿಂದ ನಡೆಸುತ್ತಿರುವ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಎಸ್‌ಸಿ ಕ್ರೈಸ್ತ ಜಾತಿಗಳನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ರಾಜ್ಯ ಮಾದಿಗ ಹಾಗೂ ಉಪ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಚ್.ಹನುಮಂತಪ್ಪ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ರೈಸ್ತ ಜಾತಿಗಳನ್ನು ಸೇರಿಸಿಕೊಂಡು ಜಾತಿ ಸಮೀಕ್ಷೆ ಮಾಡುವುದು ಸಂವಿಧಾನ ವಿರೋಧಿಯಾಗಿದೆ. ಕ್ರಮಬದ್ಧತೆಯೇ ಇಲ್ಲದ ಈ ಜಾತಿ ಸಮೀಕ್ಷೆಯ ಗೊಂದಲದ ಹಿಂದೆ ಕೊಳಕು ರಾಜಕಾರಣದ ಹುನ್ನಾರವಿದೆ ಎಂದು ಆರೋಪಿಸಿದರು.
ಈ ಸಮೀಕ್ಷೆ ವಿರುದ್ಧ ರಾಜ್ಯಾದ್ಯಂತ ದಲಿತರು ಬೀದಿಗಿಳಿಯಬೇಕಾಗುತ್ತದೆ. ಇದರ ಬಗ್ಗೆ ಆಯೋಗ ಕೂಡಲೇ ಸ್ಪಷ್ಟನೆ ನೀಡಬೇಕು. ಅಧಿಕೃತ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿಗಳ ಕ್ರೈಸ್ತ್ ಟ್ಯಾಗ್ ತೆಗೆಯಬೇಕು ಎಂದು ಒತ್ತಾಯಿಸಿದರು.
ಎರಡು ತಿಂಗಳ ಹಿಂದಯಷ್ಟೇ ನ್ಯಾ.ನಾಗಮೋಹನದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಮಾಡಿದೆ. ಅದಕ್ಕೆ ದಲಿತರ ಮೀಸಲು ನಿಧಿಯಿಂದ 150 ಕೋಟಿ ರೂ. ವ್ಯಯಿಸಲಾಗಿದೆ. ಈಗ ಮತ್ತೆ ದಲಿತರ ಸಮೀಕ್ಷೆ ಮಾಡುವ ಅಗತ್ಯ ಏನಿದೆ ?. ಎರಡು ತಿಂಗಳಲ್ಲಿ ದಲಿತರ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಯಲ್ಲಿ ಯಾವ ಬದಲಾವಣೆ ಆಗಿರುತ್ತದೆ ಎಂದು ಪ್ರಶ್ನಿಸಿದರು.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರೈಸ್ತರ ಸೇರ್ಪಡೆಯಿಂದ ಸಮೀಕ್ಷೆ ನಗೆಪಾಟಿಲಿಗೆ ಗುರಿಯಾಗಿದೆ. ಸರ್ಕಾರ ಇಡಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಹೈಕ್‌ಮಾಂಡ್ ಅನ್ನು ಒಲೈಸಲು ಸಾಮಾಜಿಕ ನ್ಯಾಯದ ಹಿತವನ್ನು ಬಲಿಕೊಡಲಾಗಿದೆ ಎಂದು ಕಿಡಿಕಾರಿದರು. ಸಮುದಾಯದ ಮುಖಂಡರಾದ ಸೋಮಶೇಖರ, ಈಶ್ವರಪ್ಪ, ಶಿವಶಂಕರ, ನರಸಪ್ಪ, ತಿಮ್ಮಪ್ಪ, ತಿಪ್ಪೇಸ್ವಾಮಿ, ನರಸಿಂಹಬಾಬು ಇದ್ದರು.