ಪ್ರದೇಶಾಭಿವೃದ್ಧಿಯಲ್ಲಿ ಕಳಪೆ ಸಾಧನೆ- ಶಾಲಿನಿ ರಜನೀಶ್ ನೋಟಿಸ್‌ನಲ್ಲಿ ಬಯಲು

160222 Shalini Rajanish Letter
ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಅನುದಾನ ಬಳಕೆಯಾಗದೆ ಇರುವ ಕುರಿತು ವಿವರಣೆ ಕೇಳಿ ಎಡಿಸಿಗಳಿಗೆ ನೀಡಿರುವ ನೋಟಿಸ್.
Published on

ಶ್ರೀಕಾಂತ ಅಕ್ಕಿ ಬಳ್ಳಾರಿ

ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆಸ್ಥೆ ವಹಿಸಬೇಕಾದ ರಾಜ್ಯದ 10 ಜಿಲ್ಲೆಗಳ ಹಲವು ಶಾಸಕರು ಅನುದಾನ ಬಳಕೆಯಲ್ಲಿ ಅಸಡ್ಡೆ ತೋರಿರುವ ವಿಚಾರ ಬೆಳಕಿಗೆ ಬಂದಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಕಷ್ಟು ಹಣವಿದ್ದರೂ ಪ್ರದೇಶಾಭಿವೃದ್ಧಿಯಲ್ಲಿ ಕಳಪೆ ಸಾಧನೆ ತೋರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಬಳ್ಳಾರಿ-ವಿಜಯನಗರ, ಕೊಪ್ಪಳ, ಯಾದಗಿರಿ, ಕಲಬುರಗಿ, ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ, ಮಂಡ್ಯ ಹಾಗೂ ಧಾರವಾಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಅನುದಾನವನ್ನು ಶೇ.40ಕ್ಕಿಂತ ಕಡಿಮೆ ಬಳಕೆ ಮಾಡಿರುವುದು ಅಭಿವೃದ್ಧಿ ಪರ ಕಾಳಜಿ ಎತ್ತಿ ತೋರಿಸುತ್ತದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಡಿಸೆಂಬರ್ 2021 ಅಂತ್ಯಕ್ಕೆ ಕಡಿಮೆ ಪ್ರಗತಿ ಸಾಧಿಸಿರುವ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ಈ ಕುರಿತಂತೆ ಸೂಕ್ತ ಸಮಜಾಯಿಷಿ ನೀಡಲು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ವಿವರಣೆ ಕೇಳಿ ಈಚೆಗೆ ನೋಟಿಸ್ ಜಾರಿಗೊಳಿಸಿರುವುದರಿಂದ ಶಾಸಕರು ಅನುದಾನ ಬಳಕೆಯಲ್ಲಿ ಹಿಂದಿರುವ ವಿಚಾರ ಬೆಳಕಿಗೆ ಬಂದಿದೆ.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ರಾಜ್ಯದ ಎಲ್ಲ ಶಾಸಕರಿಗೆ ವಾರ್ಷಿಕ 2ಕೋಟಿ ರೂ.ಅನುದಾನ ಮೀಸಲಿಡಲಾಗುತ್ತದೆ. ಅದರಲ್ಲಿ ರಸ್ತೆ, ದೇವಸ್ಥಾನ ನಿರ್ಮಾಣ ಮತ್ತು ಜೀರ್ಣೋದ್ಧಾರ, ಅಂಗನವಾಡಿ, ಸಮುದಾಯ ಭವನ ನಿರ್ಮಾಣ, ಯುಜಿಡಿ ಕಾಮಗಾರಿ, ಉದ್ಯಾನ, ಸ್ಮಶಾನ, ಕೆರೆ, ನಾಲಾ ಅಭಿವೃದ್ಧಿ, ಕುಡಿಯುವ ನೀರು ಮತ್ತು ಪೈಪ್‌ಲೈನ್ ವ್ಯವಸ್ಥೆಗಳಂಥ ಸಾರ್ವಜನಿಕ ಮೂಲ ಸೌಕರ್ಯ ಕಲ್ಪಿಸಲು ಶಾಸಕರು ಈ ಅನುದಾನ ಬಳಸಿಕೊಳ್ಳಬೇಕು. ಆರ್ಥಿಕ ವರ್ಷಕ್ಕೆ ನಿಗದಿಪಡಿಸಿದ 2 ಕೋಟಿ ರೂಪಾಯಿ ಆಯಾ ಜಿಲ್ಲಾಧಿಕಾರಿ ಖಾತೆಗೆ ಜಮೆ ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯಿತಿ, ನಿರ್ಮಿತಿ ಕೇಂದ್ರ ಹಾಗೂ ಲೋಕಪಯೋಗಿ ಸೇರಿ ಇತರ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಇದರ ಉಸ್ತುವಾರಿ ಅಪರ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ಆದರೆ, ನೇರವಾಗಿ ವಿನಿಯೋಗಿಸಿಕೊಳ್ಳಬಹುದಾದ ಅನುದಾನವನ್ನು ಹಲವು ಶಾಸಕರು ಬಳಸಿಕೊಳ್ಳುವಲ್ಲಿ ವಿಲರಾಗಿದ್ದರೆ, ಕೆಲವರು ಬಳಸಿದ್ದಾರೆ ಕೂಡಾ. ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಸೂಕ್ತ ಸಮಯದಲ್ಲಿ ಶಾಸಕರಿಗೆ ಮಾಹಿತಿ ಏಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಅಭಿವೃದ್ಧಿಗೆ ಅನುದಾನ ಸಿಗುತ್ತದೆ ಎಂದರೆ ನಾವು ಹೇಗೆ ಬಿಡುತ್ತೇವೆ ? ನಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆಯೊ ಅದೆಲ್ಲವನ್ನು ಬಳಸಿಕೊಂಡಿದ್ದೇವೆ. ಇನ್ನೂ ಹೆಚ್ಚಾಗಿ ಅನುದಾನ ಕೊಟ್ಟರೂ ನಮಗೆ ಅಭ್ಯಂತರವಿಲ್ಲ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಕೈಗೊಳ್ಳುವೆ.| ಜಿ.ಸೋಮಶೇಖರರೆಡ್ಡಿ, ಶಾಸಕ, ಬಳ್ಳಾರಿ ನಗರಸರ್ಕಾರ ಅನುದಾನ ನೀಡಿದರೂ ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ವಿನಿಯೋಗ ಮಾಡಿಕೊಳ್ಳುವುದಿಲ್ಲ ಎಂದರೆ ಆಯಾ ಕ್ಷೇತ್ರದ ಆಡಳಿತ ನಡೆಸುವವರ ಅಭಿವೃದ್ಧಿ ಕಾಳಜಿ ಎದ್ದು ತೋರುತ್ತದೆ. ಯಾವೆಲ್ಲ ಶಾಸಕರು ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಹಿಂದುಳಿದ್ದಾರೆ ಎಂಬುದನ್ನು ಪಟ್ಟಿ ಮಾಡಿ, ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ಅಂದಾಗ ಅವರಿಗೆ ಬುದ್ಧಿ ಬರುತ್ತದೆ.| ವೆಂಕಟರೆಡ್ಡಿ, ನಾಗರಿಕ, ಬಳ್ಳಾರಿಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶೇ.40ಕ್ಕಿಂತ ಕಡಿಮೆ ಬಳಕೆ ಮಾಡಿಕೊಂಡಿದ್ದೀರಿ ಎಂದು ಇತ್ತೀಚೆಗೆ ಸಾಂಖ್ಯಿಕ ಇಲಾಖೆಯ ಅಪರ ಆಯುಕ್ತರು ನೋಟಿಸ್ ನೀಡಿದ್ದರು. ಆದರೆ, ಜಿಲ್ಲೆಯಲ್ಲಿ ನಿಗದಿತವಾಗಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ನೋಟಿಸ್‌ಗೆ ವಿವರಣೆ ನೀಡಿದ್ದೇನೆ.| ಮಂಜುನಾಥ, ಅಪರ ಜಿಲ್ಲಾಧಿಕಾರಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net