ರೆಡ್ಡಿ , ರಾಮುಲುಗೆ ಹೈಕ್‌ಮಾಂಡ್ ಬುಲಾವ್

Published on

ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಅಪ್ತರ ಎನಿಸಿಕೊಂಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ ಈಚೆಗೆ ಎದ್ದಿದ್ದ ಇಬ್ಬರ ನಡುವಿನ ಭಿನ್ನಮತದ ಶಮನಗೊಳ್ಳುವ ಸಮಯ ಕೂಡಿ ಬಂದಿದೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಇಬ್ಬರನ್ನು ಒಟ್ಟಿಗೆ ದೆಹಲಿಯ ವರಿಷ್ಠರ ಭೇಟಿಗೆ ಆಹ್ವಾನಿಸಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಹೆಚ್ಚಿಸಿದೆ. ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಸಂಡೂರಿನ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ಹಾಗೂ ಕೆಲವೊಂದು ಆಸ್ತಿ ವಿವಾದ ಸೇರಿದಂತೆ ರೆಡ್ಡಿ ಹಾಗೂ ರಾಮುಲು ನಡುವಿನ ವೈಮನಸ್ಸಿನ ಒಳಜಗಳವನ್ನು ಈ ಇಬ್ಬರು ನಾಯಕರು ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಟೀಕಿಸಿಕೊಂಡಿದ್ದು ಬಿಜೆಪಿಗೆ ಹಿನ್ನಡೆ ಉಂಟಾಗಿತ್ತು.

ಅಲ್ಲದೆ, ಜಿಲ್ಲೆಯಲ್ಲಿ ಕಳೆದ ಮಹಾನಗರ ಪಾಲಿಕೆಯಿಂದ, ವಿಧಾನಸಭಾ, ಲೋಕಸಭಾ ಹಾಗೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಮುಖಭಂಗ ಎದುರಿಸಿತ್ತು. ಇದರ ನಡುವೆ ಬಳ್ಳಾರಿಯನ್ನು ಬಿಜೆಪಿಯ ಕೋಟೆಯಾಗಿ ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಈ ನಾಯಕರ ನಡುವಿನ ವೈಮನಸ್ಸು ರಾಜ್ಯ ಹಾಗೂ ಕೇಂದ್ರ ನಾಯಕರಿಗೆ ತಲೆ ನೋವು ಪರಿಣಮಿಸಿತು. ಸದ್ಯ, ಶುಕ್ರವಾರದಂದು ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಜನಾರ್ದನರೆಡ್ಡಿ ಅವರಿಗೆ ದೂರವಾಣಿ ಮೂಲಕ ಇಬ್ಬರು ಒಟ್ಟಿಗೆ ದೆಹಲಿಗೆ ಆಹ್ವಾನಿಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಯಾಗಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ.

ರಾಮುಲು ಏಕಾಂಗಿ ಸಂಚರ : ಕಳೆದ ಆರು ತಿಂಗಳಿಂದ ರೆಡ್ಡಿ ಸಹೋದರರಿಂದ ಅಂತರ ಕಾಯ್ದುಕೊಂಡಿರುವ ಬಿ.ಶ್ರೀರಾಮುಲು ಜಿಲ್ಲಾದ್ಯಂತ ಏಕಾಂಗಿಯಾಗಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿರುವ ರಾಮುಲು ಅಲ್ಲಿ ನಡೆಯುವ ಕ್ರಿಕೆಟ್ ಟೂರ್ನ್‌ಮೆಂಟ್, ಕುಂಭೋತ್ಸವ, ಜಾತ್ರೆ, ಕಾರ್ಯಕರ್ತರ ವಿವಾಹಗಳಲ್ಲಿ ಕಾಣಿಸಿಕೊಂಡು ಫುಲ್ ಆ್ಯಕ್ಟಿವ್‌ಯಾಗಿದ್ದಾರೆ. ಈಚೆಗೆ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಅವರ ಹುಟ್ಟುಹಬ್ಬಕ್ಕೆ ಮನೆಗೆ ನೇರವಾಗಿ ಭೇಟಿ ನೀಡಿ ಶುಭಾಶಯ ಹಾರೈಸಿದರು. ಆದರೆ, ಅಕ್ರಮ ಗಣಿಗಾರಿಕೆ ಪ್ರಕರಣದಡಿ ಕಳೆದ ಒಂದು ತಿಂಗಳ ಹಿಂದೆ ಜೈಲು ಸೇರಿದ್ದ ಅಪ್ತ ಗೆಳೆಯನ ಭೇಟಿ ಹಾಗೂ ಜೈಲಿನಿಂದ ಬಿಡುಗಡೆಗೊಂಡ ಬಳಿಕವಾದರೂ ಔದರ್ಯಕ್ಕೆ ಆದರೂ ಆರೋಗ್ಯ ವಿಚಾರಿಸಿಲ್ಲ. ರೆಡ್ಡಿಯಿಲ್ಲದೆ ರಾಮುಲು ಇಲ್ಲ ಎಂಬ ವಾಕ್ಯ ಅಳಿಸಲು ಈಗಿನಿಂದಲೇ ರಾಮುಲು ಏಕಾಂಗಿ ಸುತ್ತಾಡಿ ಗೆಲ್ಲಬೇಕು ಎಂಬ ಪಣ ತೊಟ್ಟಂತಿದೆ.

ರೆಡ್ಡಿ ಸಹೋದರರು ಒಗ್ಗಟ್ಟು : ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ಎಂಬುದಾಗಿ ಕೋಪವಿತ್ತು. ಆದ್ದರಿಂದ, ರೆಡ್ಡಿ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ರೆಡ್ಡಿ ಬಿಜೆಪಿಗೂ ಬಂದರೂ ಇಬ್ಬರ ನಡುವೆ ಹಳೆಯದಷ್ಟು ಬಾಂಧವ್ಯ ಇರಲಿಲ್ಲ. ಈಚೆಗೆ ರೆಡ್ಡಿ ಜೈಲು ಸೇರಿದ ಬಳಿಕ ಪತ್ನಿ ಅರುಣಾ ಲಕ್ಷ್ಮೀ ಏಕಾಂಗಿಯಾಗಿ ರಾಜ್ಯ ಹಾಗೂ ದೇಶದ ವಿವಿಧ ದೇವಸ್ಥಾನಗಳ ಭೇಟಿ ನೀಡಿ ಪೂಜೆ ಸಲ್ಲಿಸಿ, ಕಾನೂನು ತಜ್ಞರೊಂದಿಗೆ ಚರ್ಚಿಸಿ ಪತಿಗೆ ಜಾಮೀನು ದೊರಕಿಸುವಲ್ಲಿ ಯಶ್ವಸಿಯಾದರು. ಆದರೆ, ರೆಡ್ಡಿ ಜೈಲಿನಲ್ಲಿರುವಾಗ ಸೋಮಶೇಖರರೆಡ್ಡಿ ಅಂತರ ಕಾಯ್ದು ಕೊಂಡಿದ್ದರು ಎನ್ನಲಾಗಿದೆ. ಆದರೆ, ರೆಡ್ಡಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸಹೋದರ ಸೋಮಶೇಖರರೆಡ್ಡಿ ಹುಟ್ಟುಹಬ್ಬದ ಅಂಗವಾಗಿ ನೇರವಾಗಿ ಮನೆಗೆ ಭೇಟಿ ನೀಡಿ ಶುಭಾಶಯ ತಿಳಿಸಿ ಹಾರೈಸಿದರು. ಅಲ್ಲದೆ, ಕಳೆದ ಕೆಲ ತಿಂಗಳಿಂದ ಇಬ್ಬರು ಸಹೋದರರು ಒಟ್ಟಿಗೆ ಕ್ಷೇತ್ರದ ವಿವಿಧಡೆ ಭೇಟಿ ನೀಡುತ್ತಿರುವುದು ಗಮನಿಸಿದರೆ ಸಹೋದರರು ಮತ್ತೋಮ್ಮೆ ಒಂದಾಗಿದ್ದಾರೆ ಎಂಬಂತೆ ಕಾಣುತ್ತಿದೆ.

ಏನೇ ಇರಲಿ ಸದ್ಯ ಇಬ್ಬರ ನಾಯಕರನ್ನು ದೆಹಲಿಯ ಹೈಕ್‌ಮಾಂಡ್ ಆಹ್ವಾನಿಸಿದ್ದು, ಕೇಂದ್ರ ನಾಯಕರ ಮಾತಿನಂತೆ ಹಳೆಯ ದ್ವೇಷ ಮರೆತು ಒಂದಾಗಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಮುಂದಾಗುತ್ತಾರೆ ಎಂಬುದು ಕಾದು ನೋಡಬೇಕಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net