

ಅಶೋಕ ನೀಮಕರ್ ಬಳ್ಳಾರಿ
ಜಿಲ್ಲೆ ವಿಭಜನೆಗೆ ಶಾಸಕರಾದ ಜಿ.ಸೋಮಶೇಖರರೆಡ್ಡಿ ಹಾಗೂ ಜಿ.ಕರುಣಾಕರರೆಡ್ಡಿ ಸಹೋದರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಉದ್ದೇಶಿತ ವಿಜಯನಗರ ಜಿಲ್ಲೆ ರಚನೆ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಹಾಗೂ ರಾಮುಲು ದೋಸ್ತಿ ಕುಟುಂಬ ರಾಜಕೀಯ ಪ್ರಾಬಲ್ಯ ಹೊಂದಲಿದೆ.
ಜಿಲ್ಲೆಯಲ್ಲಿ ಪ್ರಸ್ತುತ 10 ವಿಧಾನಸಭಾ ಕ್ಷೇತ್ರಗಳಿವೆ. ವಿಜಯನಗರ ಜಿಲ್ಲೆ ರಚನೆಯಾದರೆ ಮೂಲ ಜಿಲ್ಲೆಯಲ್ಲಿ ಐದು ಕ್ಷೇತ್ರಗಳು ಉಳಿಯಲಿವೆ. ಈ ಪೈಕಿ ಬಳ್ಳಾರಿ ನಗರ, ಬಳ್ಳಾರಿ (ಗ್ರಾಮೀಣ) ಹಾಗೂ ಕಂಪ್ಲಿ ಕ್ಷೇತ್ರಗಳಲ್ಲಿ 2008ರಿಂದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕುಟುಂಬದವರು ಚುನಾವಣಾ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಜಿ.ಜನಾರ್ದನರೆಡ್ಡಿ ಸಹೋದರ ಜಿ.ಸೋಮಶೇಖರರೆಡ್ಡಿ ಎರಡು ಬಾರಿ ಶಾಸಕರಾಗಿದ್ದಾರೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಮೂರು ಬಾರಿ ಶಾಸಕರಾಗಿದ್ದರು. ತಲಾ ಒಂದು ಸಲ ಬಿಜೆಪಿ, ಪಕ್ಷೇತರ ಹಾಗೂ ಬಿಎಸ್‌ಆರ್‌ನಿಂದ ಆಯ್ಕೆಯಾಗಿದ್ದರು. 2014ರಲ್ಲಿ ಶ್ರೀರಾಮುಲು ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಶ್ರೀರಾಮುಲು ಆಪ್ತ ಓಬಳೇಶ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಶ್ರೀರಾಮುಲು ಸಹೋದರ ಸಂಬಂಧಿ, ಮಾಜಿ ಸಂಸದ ಎಸ್.ಪಕ್ಕೀರಪ್ಪ ಕಣಕ್ಕಿಳಿದಿದ್ದರು.
ಶ್ರೀರಾಮುಲು ಒಂದು ಉಪ ಚುನಾವಣೆ ಸೇರಿದಂತೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಓಬಳೇಶ ಮತ್ತು ಪಕ್ಕೀರಪ್ಪ ಗೆಲ್ಲಲು ಸಾಧ್ಯವಾಗಿರಲಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಈಗಲೂ ಪ್ರಾಬಲ್ಯ ಹೊಂದಿದ್ದು, ಪರಾಜಿತ ಅಭ್ಯರ್ಥಿ ಪಕ್ಕೀರಪ್ಪ ಸಕ್ರಿಯವಾಗಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲು ಅಳಿಯ ಟಿ.ಎಚ್.ಸುರೇಶಬಾಬು ಎರಡು ಬಾರಿ ಚುನಾಯಿತರಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ ವಿರುದ್ಧ ಪರಾಭವಗೊಂಡಿದ್ದರು.
ಸಂಡೂರಿನಲ್ಲೂ ಸಚಿವ ಶ್ರೀರಾಮುಲು ಆಪ್ತ ಕೆ.ಎಸ್.ದಿವಾಕರ ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ಅವರೇ ಸಂಡೂರಿನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ದಿಢೀರನೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಸಿರಗುಪ್ಪದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಬಿಜೆಪಿ ಪಾಲಿಗೆ ಪ್ರಶ್ನಾತೀತ ಎನ್ನುವಂತಿದ್ದಾರೆ. 2004ರಿಂದ ನಾಲ್ಕು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದಾರೆ. ಉದ್ದೇಶಿತ ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ರಾಜಕೀಯದಲ್ಲಿ ಭಿನ್ನ ವಾತಾವರಣ ಇದೆ. ಕೇವಲ ವಿಜಯನಗರ ಕ್ಷೇತ್ರದ ಬಗ್ಗೆ ಗಮನ ಹರಿಸಿದ್ದ ಸಚಿವ ಆನಂದ ಸಿಂಗ್ ತಮ್ಮ ಆಪ್ತರನ್ನು ಕಣಕ್ಕಿಳಿಸುವ ಉದ್ದೇಶದಿಂದ ಹಬೊಹಳ್ಳಿ ಕ್ಷೇತ್ರದಲ್ಲೂ ಗಮನ ಕೇಂದ್ರೀಕರಿಸಿದ್ದಾರೆ ಎಂಬ ಮಾತುಗಳು ತುಂಬಾ ದಿನಗಳಿಂದ ಚಾಲ್ತಿಯಲ್ಲಿವೆ. ರೆಡ್ಡಿ ಸಹೋದರರ ಪೈಕಿ ಜಿ.ಕರುಣಾಕರರೆಡ್ಡಿ ಸ್ಪರ್ಧಿಸುತ್ತಿರುವ ಹರಪನಹಳ್ಳಿ ಕ್ಷೇತ್ರ ವಿಜಯನಗರ ಜಿಲ್ಲೆಯ ಭಾಗವಾಗಲಿದೆ.
ಆಪ್ತರನ್ನು ಕಣಕ್ಕಿಳಿಸುವ ಉದ್ದೇಶ
ಉದ್ದೇಶಿತ ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳ ರಾಜಕೀಯದಲ್ಲಿ ಭಿನ್ನ ವಾತಾವರಣ ಇದೆ. ಕೇವಲ ವಿಜಯನಗರ ಕ್ಷೇತ್ರದ ಬಗ್ಗೆ ಗಮನ ಹರಿಸಿದ್ದ ಸಚಿವ ಆನಂದ ಸಿಂಗ್ ತಮ್ಮ ಆಪ್ತರನ್ನು ಕಣಕ್ಕಿಳಿಸುವ ಉದ್ದೇಶದಿಂದ ಹಬೊಹಳ್ಳಿ ಕ್ಷೇತ್ರದಲ್ಲೂ ಗಮನ ಕೇಂದ್ರೀಕರಿಸಿದ್ದಾರೆ ಎಂಬ ಮಾತುಗಳು ತುಂಬಾ ದಿನಗಳಿಂದ ಚಾಲ್ತಿಯಲ್ಲಿವೆ. ರೆಡ್ಡಿ ಸಹೋದರರ ಪೈಕಿ ಜಿ.ಕರುಣಾಕರರೆಡ್ಡಿ ಸ್ಪರ್ಧಿಸುತ್ತಿರುವ ಹರಪನಹಳ್ಳಿ ಕ್ಷೇತ್ರ ವಿಜಯನಗರ ಜಿಲ್ಲೆಯ ಭಾಗವಾಗಲಿದೆ.
ಇಡೀ ಜಿಲ್ಲೆ ವಶದಲ್ಲಿತ್ತು…
2008ರ ಚುನಾವಣೆ ವೇಳೆ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಬಿಜೆಪಿ ಟಿಕೆಟ್ ನೀಡುವಿಕೆಯಲ್ಲಿ ಜಿ.ಜನಾರ್ದನರೆಡ್ಡಿ ಮಾತಿಗೆ ಮನ್ನಣೆ ಸಿಕ್ಕಿತ್ತು. 2018ರ ಚುನಾವಣೆಯಲ್ಲಿ ಕೂಡ್ಲಿಗಿಯಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಾಗಿದ್ದ ಎನ್.ವೈ.ಗೋಪಾಲಕೃಷ್ಣರನ್ನು ಬಿಜೆಪಿಗೆ ಕರೆ ತಂದು ಚುನಾವಣಾ ಕಣಕ್ಕಿಳಿಸಿದ್ದರು. ಜಿಲ್ಲೆ ವಿಭಜನೆ ಬಳಿಕ ಮೂರು ಕ್ಷೇತ್ರಗಳಲ್ಲಿ ಹಿಡಿತದಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಗತವೈಭವ ಮರಳುವ ಬಗ್ಗೆ ಬಿಜೆಪಿಯಲ್ಲೇ ಚರ್ಚೆಗಳು ನಡೆದಿವೆ.
ಕಾಂಗ್ರೆಸ್‌ನಲ್ಲಿ ಹೇಗಿದೆ ವಾತಾವರಣ..?
ಮೂಲ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕೂಡ್ಲಿಗಿಯಲ್ಲಿ ಎರಡು ಬಾರಿ ಶಾಸಕರಾಗಿದ್ದ ಬಿ.ನಾಗೇಂದ್ರ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಬಾರಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿರಗುಪ್ಪದಲ್ಲಿ ಶಾಸಕರಾಗಿದ್ದ ಬಿ.ಎಂ.ನಾಗರಾಜ ಬದಲಿಗೆ ಶಾಸಕ ಬಿ.ನಾಗೇಂದ್ರ ಅಳಿಯ ಬಿ.ಮುರಳಿಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಶಾಸಕ ಬಿ.ನಾಗೇಂದ್ರ ಕುಟುಂಬ ಕೂಡ ಎರಡು ಕ್ಷೇತ್ರಗಳಲ್ಲಿ ರಾಜಕೀಯವಾಗಿ ಸಕ್ರಿಯವಾಗಿದೆ.