ರೆಡ್ಡಿ ಈಗ ಒಬ್ಬಂಟಿ

Published on

ಬಳ್ಳಾರಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಸದ್ಯ ಅಪ್ತ ಗೆಳೆಯ ಹಾಗೂ ಸಹೋದರರ ಬೆಂಬಲವಿಲ್ಲದೆ ಒಬ್ಬಂಟಿಯಾಗಿದ್ದಾರೆ.

ಒಂದು ಕಾಲದ ರಾಜ್ಯ ರಾಜಕೀಯ ಹಾಗೂ ಅಕ್ರಮ ಗಣಿಗಾರಿಕೆಯಿಂದ ದೇಶವೇ ಬಳ್ಳಾರಿ ಜಿಲ್ಲೆಯತ್ತ ತಿರುಗಿ ನೋಡುವಂತೆ ಮಾಡಿದ್ದ ರೆಡ್ಡಿ ಈಗ ಒಂಟಿಯಾಗಿ ಆಂಧ್ರ ಚಂಚಲಗೂಡಿನಲ್ಲಿ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರಪದೇಶದ ಒಬಳಾಪುರಂ ಮೈನಿಂಗ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಆರೋಪದಡಿ 2011ರಲ್ಲಿ ರೆಡ್ಡಿಯನ್ನು ಬಂಧಿಸಿದ್ದ ವೇಳೆ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿತ್ತು. ಇದಕ್ಕೆ ಮುಖ್ಯ ಕಾರಣ ಅಪ್ತ ಗೆಳೆಯ, ಮಾಜಿ ಸಚಿವ ಬಿ.ಶ್ರೀರಾಮುಲು, ಸಹೋದರರಾದ ಜಿ.ಕರುಣಾಕರ ರೆಡ್ಡಿ, ಜಿ.ಸೋಮಶೇಖರರೆಡ್ಡಿ, ಮಾಜಿ ಶಾಸಕ ಬಿ.ಸುರೇಶಬಾಬು, ಮಾಜಿ ಸಂಸದರಾದ ಜೆ.ಶಾಂತ, ಸಣ್ಣಪಕ್ಕೀರಪ್ಪ ಬಂಧನ ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರಿ ಹಲವು ಪ್ರತಿಭಟನೆಗಳು ನಡೆಸಿ ಬೆಂಬಲಕ್ಕೆ ನಿಂತಿದ್ದರು.

ಅಪ್ತ ಗೆಳೆಯ ದೂರ : 1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧೆಸಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸರೋಜ ಪರ ಬಿ.ಶ್ರೀರಾಮುಲು, ಜಿ.ಜನಾರ್ದನರೆಡ್ಡಿ ಜೋಡೆತ್ತುಗಳಂತೆ ಬಿರುಸಿನ ಪ್ರಚಾರ ನಡೆಸಿದರು. ಆ ಚುನಾವಣೆಯಲ್ಲಿ ಬಿಜೆಪಿ ಸೋತರು ರಾಜಕೀಯ ಮಟ್ಟದಲ್ಲಿ ಈ ಇಬ್ಬರು ಹೆಸರುವಾಸಿಯಾದರು. ಅಲ್ಲಿಂದ ಆರಂಭವಾದ ಈ ಗೆಳೆತನ ಮಾಜಿ ಸಿಎಂ ಬಿ.ಎಸ್.ಯೂಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಅಪರೇಷನ್ ಕಮಲ ಮೂಲಕ ಸರ್ಕಾರ ತಂದರು. ಬಳಿಕ ಅಕ್ರಮಗಣಿಗಾರಿಕೆ ಆರೋಪದಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಡೆ ಬಂದ ಬಳಿಕ ಕೋಟ್ಯಾಂತರ ರೂ. ವೆಚ್ಚದಲ್ಲಿ ರೆಡ್ಡಿ ಪುತ್ರಿ ಬ್ರಾಹ್ಮೀಣಿ ಮದುವೆಯನ್ನು ಇಬ್ಬರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿಸಿದರು. ರೆಡ್ಡಿ ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ ರಾಜ್ಯದ ವಿವಿಧಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣದಿಂದ ಬಿ.ಶ್ರೀರಾಮುಲು ವಿರುದ್ಧ ಅಭ್ಯರ್ಥಿಯನ್ನು ಸ್ಪರ್ಧಿಸದೆ ಪರೋಕ್ಷವಾಗಿ ಗೆಳೆಯನ ಬೆಂಬಲಕ್ಕೆ ನಿಂತರು. ಇತ್ತೀಚೆಗೆ ನಡೆದ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿ.ಶ್ರೀರಾಮುಲು ನೇರ ಹೊಣೆ ಎಂಬುದಾಗಿ ರಾಜ್ಯ ನಾಯಕರಿಗೆ ದೂರು ಸಲ್ಲಿಸಿದ್ದರಿಂದ ರಾಮುಲು ಬಹಿರಂಗವಾಗಿ ರೆಡ್ಡಿ ವಿರುದ್ಧ ವಾಗ್ದಳಿ ನಡೆಸಿದರು. ಕಳೆದರೆಡು ದಶಕಗಳ ಗೆಳೆತನ ನಡುವೆ ಅಸಮಾಧಾನದ ಭುಗಿಲು ಎದ್ದಿತು. ಈಗಾಗಲೇ ರೆಡ್ಡಿ ಆಂಧ್ರದ ಚಂಚಲಗೂಡು ಜೈಲು ಸೇರಿ ಐದು ದಿನಕ್ಕೂ ಅಧಿಕ ಕಳೆದಿದ್ದೂ ಈವರೆಗೂ ಔದರ್ಯಕ್ಕೂ ಅದರೂ ರೆಡ್ಡಿಯನ್ನು ರಾಮುಲು ಭೇಟಿ ಮಾಡದೆ ಇರುವುದು ಇನ್ನೂ ಇಬ್ಬರ ಶಮನ ಮುಕ್ತಾಯಗೊಂಡಿಲ್ಲ ಎಂಬುದು ಕಾಣುತ್ತಿದೆ.

ಸಹೋದರರು ಅಂತರ : ರಾಜ್ಯ ರಾಜಕೀಯದಲ್ಲಿ ತನ್ನ ಜತೆ ಸಹೋದರರನ್ನು ಬೆಳೆಸಬೇಕು ಎಂಬ ಹಂಬಲದಿಂದ ಜಿ.ಕರುಣಾಕರೆಡ್ಡಿ ಅವರನ್ನು ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವ ಸ್ಥಾನ ಹಾಗೂ ಸಂಸದರಾಗಿ ಗೆಲ್ಲಿಸಿದ್ದರು. ಮತ್ತೋಬ್ಬ ಸಹೋದರ ಜಿ.ಸೋಮಶೇಖರರೆಡ್ಡಿ ಅವರನ್ನು ಕೆಎಂಎಫ್ ಅಧ್ಯಕ್ಷ, ನಗರದಿಂದ ಶಾಸಕರಾಗಿ ಆಯ್ಕೆಯಾಗಲು ರೆಡ್ಡಿ ವರ್ಚಸ್ಸು ಮುಖ್ಯವಾಗಿತ್ತು. ಕಳೆದ ಕೆಲ ವರ್ಷಗಳ ಹಿಂದಯೇ ಸಹೋದರರ ನಡುವೆ ಆಸ್ತಿ ವಿಚಾರಕ್ಕಾಗಿ ಜಿ.ಕರುಣಾಕರರೆಡ್ಡಿ ಜಿಲ್ಲೆ ಬಿಟ್ಟು ಹರಪನಹಳ್ಳಿಯಲ್ಲಿ ಉಳಿದುಕೊಂಡು ಸಹೋದರರ ಅಂತರ ಕಾಯ್ದು ಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿ.ಸೋಮಶೇಖರರೆಡ್ಡಿ ವಿರುದ್ಧ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಕಣಕ್ಕೆ ಇಳಿಸಿ ತಮ್ಮನ ಸೋಲಿಗೆ ಮುಖ್ಯ ಕಾರಣದರು. ಮತ್ತೆ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡರು ಬಾಹ್ಯವಾಗಿ ಬೆಂಬಲಕ್ಕೆ ನಿಂತರೂ ಅಂತರಿಕವಾಗಿ ಮಾತ್ರ ರೆಡ್ಡಿ ವಿರುದ್ದ ಜಿ.ಸೋಮಶೇಖರರೆಡ್ಡಿಗೆ ಕೋಪ ಇರುವುದರಿಂದ ಅಂತರ ಕಾಯ್ದು ಕೊಂಡಿದ್ದಾರೆ.

ಕಾಂಗ್ರೆಸ್‌ಗೆ ಹರುಷ : ಜಿಲ್ಲೆಯಲ್ಲಿ ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಭರ್ಜರಿ ಗೆಲ್ಲುತ್ತಿದೆ. ನ್ಯಾಯಾಲಯವು ರೆಡ್ಡಿಗೆ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದ ಬಳಿಕ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಮತ ಗಳಿಕೆ ಹೆಚ್ಚಿಸಿಕೊಂಡಿತ್ತು. ಇದರಿಂದ, ಮುಂದಿನ ತಾಪಂ, ಜಿಪಂ ಚುನಾವಣೆಗೆ ಹೊಡೆತ ನೀಡಬಹುದು ಎಂಬ ಅತಂಕ ಕಾಂಗ್ರೆಸ್ ನಾಯಕಗೆ ಉಂಟಾಗಿತ್ತು. ಅಕ್ರಮ ಗಣಿಗಾರಿಕೆಯಿಂದ ಜೈಲು ಸೇರಿದ ಬಳಿಕ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಹರುಷ ತಂದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ದಿಂದ ಸುಲಭವಾಗಿ ಗೆಲ್ಲಬಹುದು ಎಂದು ಕಾರ್ಯಕರ್ತರ ಜತೆ ಸಂತಸ ಹಂಚಿಕೊಂಡಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು. ಸದ್ಯ, ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹೊಸ ನಾಯಕನ ಅವಶ್ಯಕತೆಯಿದ್ದು, ಇಲ್ಲದಿದ್ದರೆ ಬಿಜೆಪಿಗೆ ಹಿನ್ನಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net