ರೆಡ್ಡಿಗೆ ಜಾಮೀನು, ಯಥಾಸ್ಥಿತಿಯಂತೆ ಶಾಸಕ ಸ್ಥಾನ

Published on

ಬಳ್ಳಾರಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಸೇರಿ ನಾಲ್ವರಿಗೆ ತೆಲಂಗಾಣ ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆಂಧ್ರ ಗಡಿಯಲ್ಲಿನ ಒಎಂಸಿ ಕಂಪನಿಯ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ಹಿನ್ನೆಲೆ ಹೈದರಬಾದ್‌ನ ನಾಂಪಲ್ಲಿ ಸಿಬಿಐ ನ್ಯಾಯಾಲಯವು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ, ಅಪ್ತರಾದ ಅಲಿಖಾನ್, ಬಿ.ವಿ.ಶ್ರೀನಿವಾಸ್‌ರೆಡ್ಡಿ, ವಿ.ಡಿ. ರಾಜಗೋಪಾಲ್‌ಗೆ ವಿಧಿಸಿದ್ದ ಏಳು ವರ್ಷ ಜೈಲು ಶಿಕ್ಷೆಯನ್ನು ರದ್ದುಗೊಳಿಸಿ, ದೇಶ ಬಿಟ್ಟು ಹೋಗದಂತೆ ಹಾಗೂ ಹತ್ತು ಲಕ್ಷ ರೂ. ಕೋರ್ಟ್‌ಗೆ ಪಾವತಿಸುವಂತೆ ಸೂಚಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾದ ಐಎಎಸ್ ಅಧಿಕಾರಿ ಶ್ರೀಲಕ್ಷ್ಮೀ ವಿಚಾರಣೆಯನ್ನು ಜೂ 19ಕ್ಕೆ ಮುಂದೂಡಿದೆ.

ಏನಿದು ಪ್ರಕರಣ : ಆಂಧ್ರ ಗಡಿಯಲ್ಲಿನ ಒಎಂಸಿ ಕಂಪನಿಯ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದ ರೆಡ್ಡಿ 884 ಕೋಟಿ ರೂ. ಮೌಲ್ಯದ 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಹದಿಮೂರು ವರ್ಷಗಳಿಂದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯ ಕಳೆದ ತಿಂಗಳು ಮೇ 06 ರಂದು ಜನಾರ್ದನರೆಡ್ಡಿ ಸೇರಿ ಐವರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ಆದೇಶಿಸಿತ್ತು. ಅಲ್ಲದೆ, ಇತ್ತೀಚಿಗೆ ವಿವಿಧ ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಸಿಬಿಐ ಕೋರ್ಟ್ ತೀರ್ಪು ಪ್ರಶ್ನಿಸಿ ರೆಡ್ಡಿ ವಕೀಲರು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಶಿಕ್ಷೆಗೆ ಗುರಿಯಾಗಿದ್ದರಿಂದ ರಾಜ್ಯ ಸರ್ಕಾರ ಜಿ.ಜನಾರ್ದನರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಜಾಮೀನು ಬೆನ್ನಲ್ಲೇ ಅನರ್ಹಗೊಂಡಿದ್ದ ಶಾಸಕ ಸ್ಥಾನ ಯಥಾಸ್ಥಿತಿ ಮುಂದುವರೆಯಲಿದೆ. ಇತ್ತೀಚೆಗೆ ಪತಿ ಬಿಡುಗಡೆಗಾಗಿ ಪತ್ನಿ ಅರುಣಾ ಲಕ್ಷ್ಮೀ ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ದೇವಸ್ಥಾನ ಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ ಹಾರೈಕೆ ಸಲ್ಲಿಸಿದ್ದರು. ರೆಡ್ಡಿಗೆ ಜಾಮೀನು ದೊರೆತ ಬೆನ್ನಲೇ ಜಿಲ್ಲೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net