

ವಿಜಯವಾಣಿ ವಿಶೇಷ
ಬಳ್ಳಾರಿ: ಎಲ್ಲರೂ ಗೌರವಯುತ ಬದುಕು ಬಯಸುತ್ತಾರೆ. ಆದರೆ, ಕೆಲ ಮಹಿಳೆಯರು ಅನಿವಾರ್ಯ ಕಾರಣಗಳಿಂದ ಸಾಮಾಜಿಕವಾಗಿ ಕೆಟ್ಟದ್ದು ಎಂದು ಪರಿಗಣಿಸಲಾಗಿರುವ ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಲೈಂಗಿಕ ಕಾರ್ಯಕರ್ತೆಯರೂ ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯನಿರ್ವಹಿಸಲಿ ಎಂಬ ಉದ್ದೇಶದೊಂದಿಗೆ ಜಿಲ್ಲಾಡಳಿತ ಪರ್ಯಾಯ ವೃತ್ತಿಗೆ ನೆರವು ಕಲ್ಪಿಸಲು ಮುಂದಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಏಳು ಸಾವಿರ ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಜಿಲ್ಲೆಯ ಪಶ್ಚಿಮ ತಾಲೂಕುಗಳಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ಹೆಚ್ಚಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1200 ಹಾಗೂ ಮರಿಯಮ್ಮನಹಳ್ಳಿಯಲ್ಲಿ 400 ಜನ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಪ್ರದೇಶ ಸೈನಿಕ ನೆಲೆಗಳಾಗಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತದೆ.
ಇದರಿಂದಾಗಿ ಆರಂಭಿಕ ಹಂತದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಪರ್ಯಾಯ ವೃತ್ತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದಲ್ಲಿ ಆರಂಭಿಸಬಹುದಾದ ವೃತ್ತಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಯೋಜನಾ ವರದಿ ಸಲ್ಲಿಸಬೇಕಿದೆ. ಈ ಪೈಕಿ 40 ಸಾವಿರ ರೂ. ಮೊತ್ತವನ್ನು ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಸಹಾಯ ಧನ ನೀಡಲಾಗುತ್ತಿದೆ.
ಹಸು, ಕುರಿ, ಕೋಳಿ ಸಾಕಣೆ, ಊದಿನಕಡ್ಡಿ, ಪೇಪರ್ ಬ್ಯಾಗ್ ತಯಾರಿಕೆ ಇತ್ಯಾದಿ ಕೆಲಸಗಳಲ್ಲಿ ತೊಡಗಬಹುದಾಗಿದೆ. ಲಾನುಭವಿಗಳ ಆಸಕ್ತಿಗೆ ಅನುಗುಣವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಉಚಿತ ಊಟ ಹಾಗೂ ವಸತಿಯೊಂದಿಗೆ ಒಂದು ವಾರ ತರಬೇತಿಯನ್ನೂ ನೀಡಲು ನಿರ್ಧರಿಸಲಾಗಿದೆ.
ಸ್ವ ಸಹಾಯ ಸಂಘಗಳ ರಚನೆ ಮೂಲಕ ಗುಂಪು ಆಧಾರಿತ ಉದ್ದಿಮೆಯಲ್ಲಿ ತೊಡಗಲು ಕೂಡ ಉತ್ತೇಜನ ನೀಡಲಾಗುತ್ತಿದೆ. ಮಸಾಲೆ ಹಾಗೂ ಚಿಕ್ಕಿ ತಯಾರಿಕೆ ಘಟಕ ಆರಂಭಿಸಲು ತೀರ್ಮಾನಿಸಲಾಗಿದೆ.
ಸಹಾಯ ಮುನ್ನ ಕರಾರು: ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆತರಲು ಸೌಖ್ಯ ಬೆಳಕು ಹಾಗೂ ವಿಮುಕ್ತಿ ಸೇವಾ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ. ಈ ಸಂಸ್ಥೆಗಳು ಈಗಾಗಲೇ ಲೈಂಗಿಕ ಕಾರ್ಯಕರ್ತೆಯರಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಯೋಜನೆ ಯಶಸ್ಸಿಗೆ ಸಹಕಾರಿಯಾಗಲಿದೆ ಎಂಬುದು ಇದಕ್ಕೆ ಕಾರಣ. ಸಹಾಯ ಧನ ಸೌಲಭ್ಯ ಪಡೆಯುವ ಲೈಂಗಿಕ ಕಾರ್ಯಕರ್ತೆಯರು ಮೂಲ ವೃತ್ತಿ ತೊರೆಯಬೇಕಾಗಿದೆ. ಸಹಾಯ ಧನ ನೀಡುವ ಮುನ್ನ ಈ ಕುರಿತು ಲೈಂಗಿಕ ಕಾರ್ಯಕರ್ತೆಯರಿಂದ ಕರಾರು ಮಾಡಿಕೊಳ್ಳಲಾಗುತ್ತದೆ.
ದಮನಿತ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದೊಂದಿಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ನೆರವಿನೊಂದಿಗೆ ಯೋಜನೆ ರೂಪಿಸಲಾಗಿದೆ. ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿಯಲ್ಲಿ ಯೋಜನೆಯ ಯಶಸ್ಸು ಪರಿಗಣಿಸಿ ಜಿಲ್ಲೆಯ ಇತರ ತಾಲೂಕುಗಳಲ್ಲಿ ದಮನಿತ ಮಹಿಳೆಯರ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಲಾಗುವುದು. | ಆರ್.ನಾಗರಾಜ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ
ಲೈಂಗಿಕ ಕಾರ್ಯಕರ್ತೆಯರು ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲಾಡಳಿತದ ಸಹಾಯ ಧನ ಸೌಲಭ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೆರವಿನಿಂದ ನೊಂದ ಮಹಿಳೆಯರ ಜೀವನ ಶೈಲಿ ಬದಲಾಗಲಿದೆ. ಪರ್ಯಾಯ ವೃತ್ತಿಗೆ ಪ್ರೇರೇಪಿಸಲಾಗುತ್ತಿದೆ. ಶೇ.80 ಲೈಂಗಿಕ ಕಾರ್ಯಕರ್ತೆಯರು ಪರ್ಯಾಯ ವೃತ್ತಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. | ಲಕ್ಷ್ಮಿ ನರಸಮ್ಮ ಸೌಖ್ಯ ಬೆಳಕು ಸಂಸ್ಥೆ ವ್ಯವಸ್ಥಾಪಕಿ