ಉನ್ನತ ತಜ್ಞರ ಸಮಿತಿಗೆ ಶಿಫಾರಸ್ಸು

Published on

ಬಳ್ಳಾರಿ : ಜಿಲ್ಲೆಯ ಬಾಣಂತಿಯರ ಸರಣಿ ಸಾವುನ್ನು ಸರ್ಕಾರ ಗಂಭೀರ ಪರಿಗಣಿಸಿದ್ದು, ಮತ್ತೋಮ್ಮೆ ಉನ್ನತ ತಜ್ಞರ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆಗೆ ಯೋಗ್ಯವಲ್ಲ ಎಂದು ಕರ್ನಾಟಕ ರಾಜ್ಯ ಡ್ರಗ್ಸ್ ಕಂಟ್ರೋಲ್ ವರದಿ ನೀಡಿದ್ದರಿಂದ ಬಳಸದೆ ನಿಷೇಧಿಸಲಾಗಿತ್ತು. ಆದರೆ, ಫಾರ್ಮಾಸುಟಿಕಲ್ ಕಂಪನಿಯು ಸೆಂಟ್ರಲ್ ಡ್ರಗ್ಸ್ ಲ್ಯಾಬ್ ಪರೀಕ್ಷಿಸಿ ಪಾಸಿಟಿವ್ ವರದಿ ಪಡೆದಿದೆ. ಸದ್ಯ ಇದನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಪತ್ರ ಬರೆದು ಪ್ರಶ್ನಿಸಿದ್ದೇವೆ. ಅಲ್ಲದೆ, ಈಗಾಗಲೇ ಪಶ್ಚಿಮ ಬಂಗಾ ಫಾರ್ಮಾಸ್ಯುಟಿಕಲ್ ವಿರುದ್ದ ಪ್ರಾಸಿಕ್ಯೂಷನ್‌ಗೆ ಕೋರಿದ್ದೇವೆ ಎಂದರು. ಜಿಲ್ಲೆಯ ಬಾಣಂತಿಯರ ಅಸಹಜ ಸಾವಿನ ಬಗ್ಗೆ ಮಾಹಿತಿ ಬರುತ್ತಿದ್ದಂತೆ ತನಿಖೆ ನಡೆಸಲು ರಾಜೀವ್ ಗಾಂಧಿ ವಿವಿ ಉಪಕುಲಪತಿ ನೇತೃತ್ವದಲ್ಲಿ ತಂಡ ರಚಿಸಿ ವರದಿ ಪಡೆಯಲಾಗಿದೆ. ಆರಂಭದಲ್ಲಿಯೇ ಈ ಐವಿ ಫ್ಲೂಯಿಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿಸಲಾಗಿತ್ತು. ಸದ್ಯ ಈ ಕಂಪನಿಯ ಐವಿ ಫ್ಲೂಯಿಡ್ ಸಂಪೂರ್ಣವಾಗಿ ಸರಬರಾಜು ಸ್ಥಗಿತ ಮಾಡಲಾಗಿದೆ. ರಾಜ್ಯದಲ್ಲಿ ಇಂತಹ ಸಾವು ಮರುಕಳಿಸಬಾರದು. ಇದು ಜನರ ಜೀವದ ವಿಚಾರ. ರಾಜ್ಯದಲ್ಲಿ ಕಳೆದ ಏಪ್ರಿಲ್ ತಿಂಗಳಿಂದ ಈವರೆಗೂ 327 ಬಾಣಂತಿಯರು ಮೃತಪಟ್ಟಿದ್ದು ಇದರ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ಕೂಲಂಕುಷ ಮಾಹಿತಿ ಹಾಗೂ ದಾಖಲೆಗಳನ್ನು ಬಹಿರಂಗ ಪಡಿಸಲಾಗುವುದು. ಮೃತರ ಕುಟುಂಬದ ಹೆಚ್ಚಿನ ಪರಿಹಾರದ ಬಗ್ಗೆ ಸಿಎಂ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಜಿಲ್ಲಾಸ್ಪತ್ರೆಯ ಹೆರಿಗೆ ಕೋಣೆಗಳ ಸಮುಚ್ಚಯಕ್ಕೆ ಭೇಟಿ ನೀಡಿ, ಅಲ್ಲಿನ ಬಾಣಂತಿಯರ ಆರೋಗ್ಯ ಕ್ಷೇಮ ವಿಚಾರಿಸಿದರು. ಆಸ್ಪತ್ರೆಯಿಂದ ಕೈಗೊಳ್ಳುವ ಆರೈಕೆ ಕ್ರಮಗಳ ಕುರಿತು ವೈದ್ಯರೊಂದಿಗೆ ಮಾಹಿತಿ ಪಡೆದುಕೊಂಡರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net