ಪಡಿತರ ಜೋಳ ಬಳಕೆಗೆ ಯೋಗ್ಯವಲ್ಲ

Published on

ಬಳ್ಳಾರಿ ; ಇಲ್ಲಿನ ಎಪಿಎಂಸಿ ಆವರಣದ ರಾಜ್ಯ ಉಗ್ರಾಣದಲ್ಲಿ ದಾಸ್ತಾನಿರುವ 14 ಸಾವಿರ ಕ್ವಿಂಟಾಲ್ ಪಡಿತರ ಜೋಳ ಮಾನವ ಬಳಕೆಗೆ ಯೋಗ್ಯವಿಲ್ಲ. ಸ್ವಚ್ಛಗೊಳಿಸದ ಜೋಳ ಮಾನವ ಬಳಕೆಗೆ ಯೋಗ್ಯವಿಲ್ಲ ಎಂಬುದಾಗಿ ವರದಿ ಬಹಿರಂಗಗೊಂಡಿದೆ.

ನಿರ್ವಹಣೆ ಕೊರತೆಯಿಂದಾಗಿ ಹುಳುಬಿದ್ದಿರುವ ಜೋಳವನ್ನು ಆಹಾರ ಇಲಾಖೆ ಎಫ್‌ಎಸ್‌ಎಸ್‌ಎಲ್ ಪರಿಶೀಲನೆಗೆ ಕಳುಹಿಸಿದ್ದು. ಪರಿಣಾಮ ಪಡಿತರ ಅಂಗಡಿಗಳಲ್ಲಿ ಜೋಳ ವಿತರಿಸದಂತೆ ಎಲ್ಲೆಡೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಕಳೆದ ಜ.16 ರಿಂದ ಮೂರು ದಿನಗಳ ಕಾಲ ಬಳ್ಳಾರಿಗೆ ಭೇಟಿ ನೀಡಿದ್ದ ರಾಜ್ಯ ಉಪಲೋಕಾಯುಕ್ತ ವೀರಪ್ಪ ಅವರು, ನಗರದ ಎಪಿಎಂಸಿ ಆವರಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋಡೌನ್‌ಗಳಿಗೆ ಆಕಸ್ಮಿಕವಾಗಿ ಭೇಟಿ ನೀಡಿದ್ದರು. ಅಲ್ಲಿ ದಾಸ್ತಾನಿಟ್ಟಿರುವ ಆಹಾರ ಧಾನ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಹುಳು ಬಿದ್ದಿರುವ, ಪುಡಿಪುಡಿಯಾಗಿರುವ ಜೋಳವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಗೋಡೌನ್ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಕೂಡಲೇ ಎಚ್ಚೆತ್ತುಕೊಂಡಿದ್ದ ಆಹಾರ ಇಲಾಖೆ ಅಧಿಕಾರಿಗಳು, ಗೋಡೌನ್‌ನಲ್ಲಿ ದಾಸ್ತಾನಿದ್ದ ಪಡಿತರ ಜೋಳವನ್ನು ಹಾವೇರಿ ಸೇರಿ ಪಡಿತರ ಅಂಗಡಿಗಳಿಗೆ ಸರಬರಾಜು ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ಜೋಳವನ್ನು ಎಫ್‌ಎಸ್‌ಎಸ್‌ಎಲ್‌ಗೆ ಕಳುಹಿಸಿದಾಗ ಮಾನವ ಬಳಕೆಗೆ ಯೋಗ್ಯವಿಲ್ಲ ಎಂದು ವರದಿ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕೋಟ್... ಈಗಾಗಲೇ ಪಡಿತರ ಅಂಗಡಿಗಳಿಗೆ ಸರಬರಾಜು ಆಗಿರುವ ಜೋಳ ಮಾನವ ಬಳಕೆಗೆ ಯೋಗ್ಯವಿಲ್ಲ. ವಿತರಿಸದಂತೆ ಎಲ್ಲೆಡೆ ತಡೆಹಿಡಿಯಲಾಗಿದೆ.

- ಸಕೀನಾ, ಉಪ ನಿರ್ದೇಶಕಿ, ಆಹಾರ ನಾಗರೀಕ ಸರಬರಾಜು ಇಲಾಖೆ, ಬಳ್ಳಾರಿ.

======

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net