ಬಾಲ್ಯವಿವಾಹದ ಅರಿವು ಮೂಡಿಸಿ

Published on

ಬಳ್ಳಾರಿ ; ಬಾಲ್ಯವಿವಾಹದ ಬಗ್ಗೆ ಪಾಲಕರಿಗೆ ಅರಿವು ಮೂಡಿಸಿ ಪ್ರಕರಣಗಳನ್ನು ತಡೆಯಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಅಭಿಯಾನದ ಅಂತರ್ ಇಲಾಖೆ ಸಭೆಯಲ್ಲಿ ಮಾತನಾಡಿದರು. ತಾಯಿ ಮರಣ ತಡೆಗಟ್ಟಲು ಪಾಲಕರಿಗೆ ಹೆಣ್ಣು ಮಗುವಿಗೆ 18 ವರ್ಷಗಳ ನಂತರ ಮದುವೆ ಮಾಡುವುದರ ಬಗ್ಗೆ ಮನದಟ್ಟು ಮಾಡಿಕೊಡಬೇಕು. ತಾಯ್ತನದ ಜವಾಬ್ದಾರಿ ಹಾಗೂ ವೈಜ್ಞಾನಿಕವಾಗಿ ಗರ್ಭಕೋಶದ ಸಂಪೂರ್ಣ ಬೆಳವಣಿಗೆ ಮಹತ್ವ ಸಹ ತಿಳಿಸುವ ಮೂಲಕ ಹೆಣ್ಣುಮಕ್ಕಳ ಕನಿಷ್ಠ 20 ವರ್ಷ ವಯಸ್ಸಿನ ನಂತರದ ಅವಧಿ ಗರ್ಭವತಿಯಾಗಲು ಸೂಕ್ತ ಸಮಯ ಎಂದು ಸೂಚಿಸಿದರು.

ಗರ್ಭಿಣಿ ಎಂದು ತಿಳಿದ ದಿನದಿಂದಲೇ ಗರ್ಭಿಣಿಗೆ ಕಂಡು ಬರಬಹುದಾದ ಸಾಮಾನ್ಯ, ಗಂಭೀರ ಸಮಸ್ಯೆಗಳ ಕುರಿತು ಮುತುವರ್ಜಿ ವಹಿಸಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಸದಾ ತಾಯಿಯೊಂದಿಗೆ ಹಾಗೂ ಪಾಲಕರೊಂದಿಗೆ ಸಂಪರ್ಕದಲ್ಲಿರಬೇಕು. ಕಬ್ಬಿಣಾಂಶ ಮಾತ್ರೆ ಸೇವನೆಯಿಂದಾಗುವ ಪ್ರಯೋಜನ ತಿಳಿಸಬೇಕು ಎಂದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ಸಹಜ ಹೆರಿಗೆ 48 ಗಂಟೆಗಳ ಕಾಲ, ಸಿಜರಿಯನ್ ಹೆರಿಗೆ ಐದು ದಿನಗಳ ಕಾಲ ಕಡ್ಡಾಯವಾಗಿ ದಾಖಲು ಮಾಡಿಕೊಂಡು ನಿರಂತರವಾಗಿ ತಾಯಿಯ ಆರೋಗ್ಯದ ಕುರಿತು ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಯವರು ಯಾವುದೇ ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು.

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಯೋಜನೆಯಡಿಯಲ್ಲಿ ದೊರಕುವ ಉಚಿತ ಊಟ, ಉಚಿತ ಔಷಧಿ, ಉಚಿತ ರಕ್ತ, ಉಚಿತ ಪರೀಕ್ಷೆ, ಉಚಿತ ನಗುಮಗು ವಾಹನ ಮೂಲಕ ಮನೆಗೆ ಬಿಡುವ ಕುರಿತು ಹಾಗೂ ಸಹಾಯಧನ ಅವರ ಖಾತೆಗೆ ಜಮೆ ಆಗುವ ಬಗ್ಗೆ ತಿಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net