ಗುಡುಗು ಸಹಿತ ಮಳೆ

Published on

ಬಳ್ಳಾರಿ : ಜಿಲ್ಲೆಯ ವಿವಿಧಡೆ ಸೋಮವಾರ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಕೆಲವಡೆ ಗುಡುಗು, ಬಿರುಗಾಳಿ ಹಾಗೂ ಅಲಿಕಲ್ಲು ಮಳೆ ಸಹಿತ ಮಳೆ ಸುರಿದಿದ್ದು. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಒಂದಡೇ ತಪ್ಪೆರೆದರೆ, ಮತ್ತೊಂದಡೆ ಮಳೆ ನೀರು ತಗ್ಗು ಪ್ರದೇಶ, ಬಡಾವಣೆ, ರಸ್ತೆಗಳ ಬದಿಯ ಚರಂಡಿಗಳಲ್ಲಿ ತುಂಬಿ ಜಲಾವೃತವಾಗುವಂತಾಗಿದೆ. ಇಲ್ಲಿನ ಎಸ್‌ಎನ್‌ಪೇಟೆ ಹಾಗೂ ಜಿಲ್ಲಾ ಕ್ರೀಡಾಂಗಣ ರಸ್ತೆಯ ಕೆಳ ಸೇತುವೆಗಳು ಮಳೆನೀರಿನಿಂದ ತುಂಬಿಕೊಂಡು ಸಂಚಾರಕ್ಕೆ ವಾಹನ ಸವಾರರು ಪರದಾಡುವಂತಾಗಿದ್ದು, ಸಂಚಾರ ಅಸ್ತವ್ಯಸ್ಥವಾಯಿತು. ಇದಲ್ಲದೆ, ಹಳೆಯ ತಾಲೂಕು ಕಚೇರಿ, ಪೋಸ್ಟ್ ಆಫೀಸ್ ಸೇರಿ ವಿವಿಧ ಭಾಗಗಳಲ್ಲಿ ಮಳೆ ನೀರು ನಿಂತು ಕೆರೆಯಂತೆ ಭಾಸವಾಯಿತು. ಇದರಿಂದ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುವಂತಾಯಿತು. ಕಚೇರಿಗಳ ಆವರಣದಲ್ಲಿ ಮಳೆ ನೀರು ನಿಂತ ಪರಿಣಾಮ ಸಿಬ್ಬಂದಿ ಕಚೇರಿಗೆ ತೆರಳಲು ಪರದಾಡಿದರು. ವಾರ್ಡ್‌ಗಳಲ್ಲಿ ರಾಜಕಾಲುವೆ ಬಳಿ ವಾಸವಿದ್ದ ಕುಟುಂಬಗಳ ಮನೆಗೆ ಮಳೆ ನೀರು ನುಗ್ಗಿ ರಾತ್ರಿಯಿಡಿ ಕುಟುಂಬಗಳು ಪರದಾಡಿದರು. ಅಲ್ಲದೆ, ವಿವಿಧ ಕಾಲನಿಗಳಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ವಾಹನಗಳು ಸಿಲುಕಿಕೊಂಡ ದೃಶ್ಯ ಕಂಡುಬಂದವು. ತಗ್ಗು ಪ್ರದೇಶಗಳಲ್ಲಿ ನುಗ್ಗಿದ ನೀರನ್ನು ಮೋಟರ್ ಮೂಲಕ ಹೊರಹಾಕಿದರು. ಮಳೆ ಮತ್ತು ಗಾಳಿಯಿಂದಾಗಿ ಜಿಲ್ಲೆಯ ಸಂಜೀವರಾಯನ ಕೋಟೆ ಹಾಗೂ ಕಂಪ್ಲಿಯಲ್ಲಿ ತಲಾ ಒಂದು ಮಣ್ಣಿನ ಮನೆಗಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಳಿಯಿಂದಾಗಿ ರಸ್ತೆಯಲ್ಲಿನ ಅನೇಕ ಕಡೆ ಮರ, ಗಿಡಗಳು ನೆಲಕ್ಕುರುಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net