ಬಳ್ಳಾರಿ : ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‌ನಲ್ಲಿನ ಸ್ಪಾ ಸೆಂಟರ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಎಸ್ಪಿ ಸೇರಿ ಪೊಲೀಸ್ ಅಧಿಕಾರಿಗಳು ಶನಿವಾರ ದಾಳಿ ಮಾಡಿ, ಮೂವರು ಮಹಿಳೆಯರನ್ನು ರಕ್ಷಿಸಿ, ಮೂರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ.
ಬಾಲಾ ಹೊಟೇಲ್‌ನ ಸ್ಪಾ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಎಸ್ಪಿ ಡಾ. ವಿ.ಜೆ.ಶೋಭಾರಾಣಿ, ಸಿಇಎನ್ ಡಿವೈಎಸ್‌ಪಿ, ಗಾಂಧಿನಗರ ಸಿಪಿಐ ಅವರೊಂದಿಗೆ ಖುದ್ಧು ತಾವೇ ಮಫ್ತಿಯಲ್ಲಿ ತೆರಳಿ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಮಹಿಳೆಯರು, ಮೂವರು ಪುರುಷರು ರೆಡ್ ಹ್ಯಾಂಡೆಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಲ್ಲಿ ಮೂವರು ಮಹಿಳೆಯರು ಡೆಹರಾಡೂನ್, ಆಂಧ್ರದ ವಿಜಯವಾಡ, ಮಧ್ಯಪ್ರದೇಶದವರಾಗಿದ್ದು, ಮೂವರು ಪುರುಷರಲ್ಲಿ ಇಬ್ಬರು ಬಳ್ಳಾರಿ, ಒಬ್ಬರು ಗಂಗಾವತಿ ಮೂಲದವರು ಆಗಿದ್ದಾರೆ.
ಸ್ಪಾ ಸೆಂಟರ್ ನಡೆಸುತ್ತಿದ್ದ ಆರೋಪಿ ಬಿ. ಮಹಮ್ಮದ್ ಮಾಟಿಲ್ ತಲೆ ಮರೆಸಿಕೊಂಡಿದ್ದು, ಮತ್ತೊಬ್ಬ ಆರೋಪಿ ಮುಂಬೈ ಮೂಲದ ಮಿನಾಜ್ (37) ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಎಸ್‌ಪಿ ಶೋಭಾರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಾ ಹೊಟೇಲ್‌ನೊಂದಿಗೆ ನಗರದಲ್ಲಿನ ಮತ್ತೊಂದು ಪ್ರತಿಷ್ಠಿತ ಪೋಲಾ ಹೊಟೇಲ್ ಮೇಲೂ ಪೊಲೀಸರು ದಾಳಿ ಮಾಡಿದ್ದು, ಅಲ್ಲಿ ಯಾವುದೇ ಚಟುವಟಿಕೆ ಇಲ್ಲದ ಹಿನ್ನೆಲೆಯಲ್ಲಿ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.