ಏ.26ರಂದು ಬಳ್ಳಾರಿಗೆ ರಾಹುಲ್ ಗಾಂಧಿ ಆಗಮನ

rahulgandhi
Published on

ಬಳ್ಳಾರಿ: ನಗರದಲ್ಲಿ ಏ.26ರಂದು ಕಾಂಗ್ರೆಸ್ ಬಹಿರಂಗ ಸಮಾವೇಶ ಆಯೋಜಿಸಿದ್ದು, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ಕ್ಷೇತ್ರದಲ್ಲಿ 1999ರಲ್ಲಿ ಸೋನಿಯಾ ಗಾಂಧಿ ಗೆದ್ದ ಬಳಿಕ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ, ಅವಳಿ ಜಿಲ್ಲೆಯಲ್ಲಿ ಅತ್ಯಧಿಕ ಕಾಂಗ್ರೆಸ್ ಶಾಸಕರು ಇರುವುದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಮಂತ್ರಿಗಳೊಂದಿಗೆ ಕಾರ್ಯಕರ್ತರ ಮೇಲೂ ಇದೆ. ಪಂಚ ಗ್ಯಾರಂಟಿ ಯೋಜನೆಗಳ ಬಲ ಕಾಂಗ್ರೆಸ್‌ಗೆ ಇದೆ. ಬಿಜೆಪಿಯವರು ಮೊದಲು ಗುಜರಾತ್ ಮಾಡೆಲ್ ಎಂದು ಹೇಳುತ್ತಿದ್ದರು. ಈಗ ಕರ್ನಾಟಕ ಮಾಡೆಲ್ ದೇಶದಲ್ಲಿ ಗುರುತಿಸಿಕೊಳ್ಳುತ್ತಿದೆ. ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿತ್ತು ಎಂದು ನಾಗೇಂದ್ರ ಹೇಳಿದರು.

ಅಭ್ಯರ್ಥಿ ಈ.ತುಕಾರಾಮ್, ಶಾಸಕ ಭರತರೆಡ್ಡಿ, ಬುಡಾ ಅಧ್ಯಕ್ಷ ಆಂಜನೇಯಲು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಮೇಯರ್ ಶ್ವೇತಾ ಬಿ., ಪಾಲಿಕೆ ಸದಸ್ಯ ಪೇರಂ ವಿವೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net