ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇಡಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ಸೂಚನೆ

05042020 Bellary Corona Viras Meeting
Published on

ಬಳ್ಳಾರಿ: ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿರುವ 1,204 ಜನರ ಮೇಲೆ ತೀವ್ರ ನಿಗಾ ಇಡಬೇಕು. ಈಗಾಗಲೇ 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿರುವ 232 ಜನರ ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಎಸ್.ಶ್ರೀಕರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರೊನಾಕ್ಕೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು. ರ‌್ಯಾಪಿಡ್ ರೆಸ್ಪಾನ್ಸ್ ಟೀಮ್ ಮೂಲಕ ಕ್ವಾರಂಟೈನಲ್ಲಿ ಇರುವವರ ಮೇಲೆ ನಿಗಾ ವಹಿಸಬೇಕು. ರೋಗ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಲು ಸೂಚಿಸಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಜಿಲ್ಲೆಯಲ್ಲಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಿ ಕರೊನಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಪೇಟೆಯಲ್ಲಿ 5 ಕಿಮೀ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಒಂಬತ್ತು ಆಶ್ರಯ ತಾಣಗಳನ್ನು ಆರಂಭಿಸಲಾಗಿದೆ ಎಂದರು.

ಆಶ್ರಯ ತಾಣಗಳಲ್ಲಿ ನಿತ್ಯ 707 ಜನರಿಗೆ ಊಟ ಒದಗಿಸಲಾಗುತ್ತಿದೆ. ಇದುವರೆಗೆ ನಿರಾಶ್ರಿತರಿಗೆ 42,800 ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ನಿರಾಶ್ರಿತರಿಗೆ ದಾನಿಗಳ ನೆರವಿನೊಂದಿಗೆ 6,580 ಪಡಿತರ ಕಿಟ್‌ಗಳನ್ನೂ ಒದಗಿಸಲಾಗಿದೆ. ಜಿಲ್ಲೆಯಲ್ಲಿ ನಿತ್ಯ 30 ಸಾವಿರ ಲೀ. ಹಾಲನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ಜಿಲ್ಲಾ ಸರ್ಜನ್ ಬಸರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net