ಪಿಯು ಗಣಿ ಜಿಲ್ಲೆಗೆ 27ನೇ ಸ್ಥಾನ

Published on

ಬಳ್ಳಾರಿ ; ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಣಿನಾಡು ಅವಿಭಜಿತ (ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿ )ಕಳೆದ ವರ್ಷಕ್ಕಿಂತ ಪ್ರಸ್ತಕ ಸಾಲಿನಲ್ಲಿ ಎರಡು ಸ್ಥಾನ ಮೇಲಕ್ಕೆ ಜಿಗಿದು 27ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ, ಶೇಕಡವಾರು ಫಲಿತಾಂಶದಲ್ಲಿ ಕಳೆದ ಸಾಲಿಗಿಂತ ಈ ಬಾರಿ ಶೇ.64.41% ಗಳಿಸಿ ಗಣನೀಯವಾಗಿ ಕುಸಿದಿದೆ.

ಜಿಲ್ಲೆಯ ದ್ವಿತೀಯ ಪಿಯು ಫಲಿತಾಂಶ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆ ಕಾಣುತ್ತಿಲ್ಲ. ಪ್ರತಿ ವರ್ಷ 20 ರಿಂದ 25 ಅಥವಾ ಕೊನೆಯ 31ನೇ ಸ್ಥಾನದೊಳಗೆ ಕಾಣಿಸಿಕೊಳ್ಳುತ್ತಿದೆ ಹೊರತು, ಹತ್ತರೊಳಗೆ ಅಥವಾ ಇಪ್ಪತ್ತರೊಳಗಿನ ಸ್ಥಾನ ಪಡೆದಿರುವುದು ತೀರಾ ಕಡಿಮೆ. ಅವಿಭಜಿತ ಜಿಲ್ಲೆಯು ಕಳೆದ 2022 -23ನೇ ಸಾಲಿನಲ್ಲಿ ಶೇ.69.55% ಪಡೆದು 31ನೇ ಸ್ಥಾನ, 2023 -24ನೇ ಸಾಲಿನಲ್ಲಿ ಶೇ. 74.77% ಪಡೆದು 29ನೇ ಸ್ಥಾನ ಹಾಗೂ ಪ್ರಸ್ತಕ ಸಾಲಿನಲ್ಲಿ ಶೇ.64.41% ಪಡೆದು 27ನೇ ಸ್ಥಾನಕ್ಕೆ ಜಿಗಿದು ಒಂದಷ್ಟು ಸಮಾಧಾನ ಮೂಡಿಸಿದೆ. ಈ ಪೈಕಿ ವಿಜ್ಞಾನ ವಿಭಾಗ ಶೇ.78%, ವಾಣಿಜ್ಯ ವಿಭಾಗ ಶೇ.61% ಹಾಗೂ ಕಲಾ ವಿಭಾಗ ಶೇ.59%ರಷ್ಟು ಫಲಿತಾಂಶ ಪಡೆಯುವಲ್ಲಿ ಯಶ್ವಸಿಯಾಗಿದೆ.

ಜಿಲ್ಲೆಯ ಶೇ.67.19% ಫಲಿತಾಂಶ : ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನಲ್ಲಿ ದ್ವಿತೀಯ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 12,799 ವಿದ್ಯಾರ್ಥಿಗಳ ಪೈಕಿ 8,600 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ. 67.19% ರಷ್ಟು ಫಲಿತಾಂಶ ಲಭಿಸಿದೆ. ಇದರಲ್ಲಿ 3,456 ವಿದ್ಯಾರ್ಥಿಗಳು ಹಾಗೂ 5,144 ವಿದ್ಯಾರ್ಥಿನಿಯರು ಉತೀರ್ಣರಾಗಿದ್ದು ಜಿಲ್ಲೆಯಲ್ಲಿ ಮತ್ತೋಮ್ಮೆ ವಿದ್ಯಾರ್ಥಿನಿಯರು ಮೈಲುಗೈ ಸಾಧಿಸಿದ್ದಾರೆ.

ಸಾಧನೆ : ಬಳ್ಳಾರಿ ಜಿಲ್ಲೆಯ ಕಲಾ ವಿಭಾಗದಲ್ಲಿ ಸಂಡೂರಿನ ಎಸ್‌ಇಎಸ್ ಕಾಲೇಜಿನ ಎಲ್.ಐಶ್ವರ್ಯ, ನಗರದ ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜಿನ ಬಾಲಾಜಿ ತಲಾ 586 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸಂಡೂರಿನ ಬಿಕೆಜಿ ಕಾಲೇಜಿನ ವಾಲ್ವೇಕರ್ ಸ್ಪೂರ್ತಿ ಕೇಶವ್ 594 ಪ್ರಥಮ, ನಗರದ ಬಿಪಿಎಸ್‌ಸಿ ಕಾಲೇಜಿನ ಯು.ವಿನೋದ ಕುಮಾರ 591 ದ್ವಿತೀಯ ಹಾಗೂ ಬಿಪಿಎಸ್‌ಸಿ ಕಾಲೇಜಿನ ಪಿ.ಅಭಿಸಾರಿಕಾ 589 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಿರಗುಪ್ಪದ ವಿಶ್ವಜ್ಯೋತಿ ಕಾಲೇಜಿನ ಎಚ್.ಎಂ.ಅಖಿಲ್ ಕುಮಾರ, ನಗರ ಸತ್ಯಂ ಕಾಲೇಜಿನ ಜಿ.ವಿಠಲರೆಡ್ಡಿ ತಲಾ 592 ಅಂಕ ಪಡೆದು ಪ್ರಥಮ, ಸಂಡೂರಿನ ಬಿಕೆಜಿ ಕಾಲೇಜಿನ ಜಿ.ಯಶ್ವಂತ್ ಸಾಯಿ 591 ದ್ವಿತೀಯ ಹಾಗೂ ನಗರದ ನಂದಿ ಕಾಲೇಜಿನ ಹರ್ಷದ್ ವಲಿ 589 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ಕುಸಿತ : ಕಳೆದ ಸಾಲಿಗಿಂತ ಈ ಬಾರಿ ಜಿಲ್ಲೆಯ ದ್ವಿತೀಯ ಫಲಿತಾಂಶ ಶೇ. 10% ರಷ್ಟು ಕುಸಿಯಲು ಮುಖ್ಯವಾಗಿ ಬೋಧಕರ ಕೊರತೆ ಎದ್ದು ಕಾಣುತ್ತಿದೆ. ಕಳೆದ ವರ್ಷ ಬೋಧಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯಿಂದ ಬಹುತೇಕ ಉಪನ್ಯಾಸಕರು ವರ್ಗಾವಣೆಯಾಗಿದ್ದಾರೆ. ಆದರೆ, ಬೇರೆ ಜಿಲ್ಲೆಯಿಂದ ಈ ಜಿಲ್ಲೆಗೆ ವರ್ಗಾವಣೆಗೊಂಡಿರುವ ಉಪನ್ಯಾಸಕರು ತೀರಾ ಕಡಿಮೆ. ಉಪನ್ಯಾಸಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಯು ಕೆಲ ಸ್ಥಾನಗಳಿಗೆ ಡೆಪ್ಯುಟೇಷನ್(ನಿಯೋಗ )ಮೂಲಕ ಭರ್ತಿ ಮಾಡಲಾಯಿತು. ಇದರಿಂದ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾದರು. ಅಲ್ಲದೆ, ಈ ಬಾರಿ ನಡೆದ ದ್ವಿತೀಯ ಪರೀಕ್ಷೆಯಲ್ಲಿ ಕೆಲವೊಂದು ವಿಷಯಗಳ ಪ್ರಶ್ನೆಗಳು ಕಠಿಣವಾಗಿದ್ದವು ಎಂಬ ಮಾತುಗಳು ಆರಂಭದಲ್ಲಿ ಉಪನ್ಯಾಸಕರಿಂದ ಕೇಳಿಬಂದವು. ಉಪನ್ಯಾಸಕರ ಕೊರತೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂಗ್ಲ ವಿಷಯದ ಅಧ್ಯಯನ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಮುಖ್ಯವಾಗಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿದ್ದು ವಿದ್ಯಾರ್ಥಿಗಳಿಗೆ ನುಂಗುಲಾರದು ತುತ್ತಾಗಿತ್ತು ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

ಕೋಟ್... ಈ ಬಾರಿ ಜಿಲ್ಲೆಯ ಫಲಿತಾಂಶ ಹೆಚ್ಚಿಸಲು ಇಲಾಖೆಯು ಸಾಕಷ್ಟು ಶ್ರಮಪಟ್ಟಿದೆ. ಬೋಧಕರ ಕೊರತೆ ಹಾಗೂ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡಿದರು. ಮುಂದಿನ ಬಾರಿ ಫಲಿತಾಂಶ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.

- ಗೋಪಾಲ್ ಸಾಗರ್, ಉಸ್ತುವಾರಿ ಡಿಡಿಪಿಯು, ಬಳ್ಳಾರಿ ಹಾಗೂ ವಿಜಯನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net