ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತವೆ ಎಂದು ವಿಧಾನಸಭಾ ಸದಸ್ಯ ಹಂಪನಗೌಡ ಬಾದರ್ಲಿ ಹೇಳಿದರು
ಇಲ್ಲಿನ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 19ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಆತ್ಮ ವಿಶ್ವಾಸ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಬಿಪಿಎಸ್‌ಸಿ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಮಾತನಾಡಿ, ಜಿಲ್ಲೆಯ ಹಲವರು ಆಂಗ್ಲ ಮಾಧ್ಯಮ ಐಸಿಎಸ್‌ಇ ಪಠ್ಯಕ್ರಮ ವ್ಯಾಸಂಗಕ್ಕಾಗಿ ಬೇರೆಡೆಗೆ ಹೋಗಿ ಕಷ್ಟಪಡುತ್ತಿದ್ದರು. ನಮ್ಮ ತಾಯಿಯವರು ತೆಗೆದುಕೊಂಡ ಆ ನಿರ್ಧಾರದಿಂದ ಇಂದು ಸಾವಿರಾರು ಮಕ್ಕಳು ಈ ಶಿಕ್ಷಣ ಸಂಸ್ಥೆಯಲ್ಲಿ ಐಸಿಎಸ್‌ಇ ಪಠ್ಯಕ್ರಮ ಅಭ್ಯಾಸಿಸಲು ಅನುಕೂಲವಾಗಿದೆ. ಆದ್ದರಿಂದ, ಎಲ್ಲರೂ ಈ ಪಠ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಳಿಕ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹೆಚ್ಚಿನ ಅಂಕ ಗಳಿಸಿದ ಜೆ.ಶ್ರಿವಲ್ಲಿ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ತರಗತಿವಾರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ಮೌಲ್ಯಗಳು ಎಂಬ ವಿಷಯದ ಅಧಾರದ ಮೇಲೆ ಸತ್ಯ, ಪ್ರಾಮಾಣಿಕತೆ, ಸಹನೆ, ಸಹಾಯ, ಹಿರಿಯರಿಗೆ ಗೌರವವನ್ನು ಒಳಗೊಂಡ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು. ಈ ಬಾರಿ ವಿಶೇಷವಾಗಿ ಕನ್ನಡದ ಚಲನಚಿತ್ರ ರಂಗದ ಹಳೆಯ ಗೀತೆಗಳಿಗೆ ಮಕ್ಕಳು ತಮ್ಮ ಹಾವ ಭಾವದ ಮೂಲಕ ನೃತ್ಯವನ್ನು ಪ್ರದರ್ಶಿಸಿ ನೆರೆದ ಪೋಷಕರ ಮನಸೆಳೆದರು. ಕಲಾವಿದ ರಾಜ್‌ಕಪೂರ್‌ರವರ 100 ನೇ ಶತಮಾನೋತ್ಸವದ ಅಂಗವಾಗಿ ಅವರು ಅಭಿನಯಿಸಿದ ಹಿಂದಿಯ ಹಾಡುಗಳಿಗೆ ನೃತ್ಯ ಪ್ರದರ್ಶಿಸಲಾಯಿತು.