ಬಳ್ಳಾರಿ : ಮಕ್ಕಳು ಮತ್ತು ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ಕಾನೂನು ಸೇವೆ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ಇಲ್ಲಿನ ಹೊಸ ನ್ಯಾಯಾಲಯ ಸಂಕೀರ್ಣದ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಯೋಜನೆ ಮತ್ತು ಮಾನಸಿಕ ಅಸ್ವಸ್ಥ ಹೊಂದಿರುವ ವ್ಯಕ್ತಿ ಹಾಗೂ ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗೆ ಕಾನೂನು ಸೇವೆಗಳ ಯೋಜನೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳು ಸಮಾಜದಲ್ಲಿ ಘನತೆ, ಗೌರವದಿಂದ ಬದುಕುವ ಹಕ್ಕಿದೆ. ಇಂತಹ ಮಕ್ಕಳಿಗಾಗಿ ಸೌಕರ್ಯಗಳನ್ನು ಪಡೆಯಲು ವಿಶೇಷವಾದ ಕಾನೂನುಗಳಿವೆ ಎಂದು ತಿಳಿಸಿದರು.
ಬಾಲ್ಯ ವಿವಾಹವಾದವರು, ಶಿಕ್ಷಣದಿಂದ ವಂಚಿತರಾದ ಮಕ್ಕಳು, ಅಂಗವಿಕಲ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವಾಗಬೇಕು. ಇದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಂತಹ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡು ಆತ್ಮವಿಶ್ವಾಸ ತುಂಬುವುದು ಪೋಷಕರ ಆದ್ಯ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ ಎನ್. ಹೊಸಮನೆ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಮಕ್ಕಳಿಗಾಗಿ ಮತ್ತು ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ವಿಶೇಷವಾದ ಕಾಯ್ದೆಗಳು ಇವೆ. ಸರಿಯಾದ ರೀತಿಯಲ್ಲಿ ಕಾನೂನು ಸೇವೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.