ಬಳ್ಳಾರಿ ; ರಾಜ್ಯ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲೆಯ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮಾಹಿತಿ ಒದಗಿಸಿ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ಸಂಡೂರು ತಾಲೂಕಿನ ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಜಿಪಂ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ (ದಿಶಾ)ಸಭೆಯಲ್ಲಿ ಮಾತನಾಡಿದರು. ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಬೆಳೆ ಹಾನಿಯಾಗಿದ್ದು, ರೈತರಿಗೆ ವಿಮೆ ಹಣ ಒದಗಿಸಲು ಮಂದಾಗಬೇಕು. ಅಲ್ಲದೆ, ಕಳೆಪ ಬೀಜ ಮಾರಾಟ ಮಾಡುವವರ ಮೇಲೆ ನಿಗಾವಹಿಸಿ. ಮಣ್ಣಿನ ಫಲವತ್ತೆಯ ಪರೀಕ್ಷಿಸಲು ನುರಿತ ತಜ್ಞರ ತಂಡ ನೇಮಿಸಿ ಕಾರ್ಯಾಗಾರ ಆಯೋಜಿಸಿ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಸೋಮ ಸುಂದರ್‌ಗೆ ನಿರ್ದೇಶಿಸಿದರು.
ಪ್ರತಿ ತಾಲೂಕಿನಲ್ಲಿ ದಿನ, ವಾರದ ಹಾಗೂ ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಯೋಜನೆ ರೂಪಿಸಬೇಕು. ನಗರದ ಎಪಿಎಂಸಿ ಮಾರುಕಟ್ಟೆಯ ಕಾರ್ನರ್‌ನಲ್ಲಿ ಮೀನು ಹಾಗೂ ಚಿಕನ್ ಮಾರುಕಟ್ಟೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದರು.
ಮುಂದಿನ ಮೂರು ವರ್ಷದೊಳಗೆ ಬಾಡಿಗೆ ಕಟ್ಟಡದಲ್ಲಿರುವ ಎಲ್ಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಚ್.ವಿಜಯಕುಮಾರ್‌ಗೆ ತಿಳಿಸಿದರು.
ಇತ್ತೀಚಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಶೇ. 40% ಮಕ್ಕಳು ಅನುತೀರ್ಣಗೊಂಡಿದ್ದು, ರಾಜ್ಯಮಟದಲ್ಲಿ ಕಳೆದ ಬಾರಿಗಿಂತ ಒಂದು ಸ್ಥಾನ ಕುಸಿದಿದ್ದು ಬೇಸರ ಸಂಗತಿಯಾಗಿದೆ. ಕೇವಲ ಕಟ್ಟಡ ನಿರ್ಮಿಸಿ, ಸ್ಮಾರ್ಟ್ ತರಗತಿಗಳನ್ನು ಅಳವಡಿಸಿದರೆ ಶಿಕ್ಷಣ ದೊರೆಯುವುದು ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಒದಗಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಡಿಡಿಪಿಐ ಉಮಾದೇವಿ ಕಿವಿ ಮಾತು ಹೇಳಿದರು.
ಜಿಲ್ಲೆಯ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಒದಗಿಸಿ. ಮರಿಯಮ್ಮಹಳ್ಳಿ, ಸೋಮನಹಳ್ಳಿ ಹಾಗೂ ಜೋಳದರಾಶಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಾತ್ಕಲಿಕವಾಗಿ ವೈದ್ಯರನ್ನು ನೇಮಿಸಿ ಸಾರ್ವಜನಿಕರಿಗೆ ಸೇವೆ ನೀಡಿ ಎಂದು ಡಿಎಚ್‌ಒ ಡಾ.ವೈ.ರಮೇಶಬಾಬುಗೆ ತಿಳಿಸಿದರು.
ದಿನೇದಿನೆ ಅನೈತಿಕ ಚಟುವಟಿಕೆಗಳು ಜಿಲ್ಲೆಯ ವಿವಿಧಡೆ ಹೆಚ್ಚುತ್ತಿದ್ದು, ಯಾರ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಕೆಲ ತಿಂಗಳ ಹಿಂದ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಅಂತಹವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಎಂದರು. ಆಂಧ್ರದಿಂದ ಗಡಿ ಗ್ರಾಮಗಳಿಗೆ ಸಿಎಚ್‌ಸಿ ಪೌಡರ್ ಮಿಶ್ರಿತ ಸೇಂದಿ ಸಾಗಣೆಯಾಗುತ್ತಿದ್ದ ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದು ಕೂಡಲೇ ಚೆಕ್ ಪೋಸ್ಟ್ ನಿರ್ಮಿಸಿ ತಡಿಯಿರಿ ಎಂದು ಎಸ್ಪಿಗೆ ಸೂಚಿಸಿದರು.
ಭ್ರಷ್ಟ ಅಧಿಕಾರಿ ಎಸಿ : ಜಿಲ್ಲೆಯಲ್ಲಿ ಅತ್ಯಂತ ಭ್ರಷ್ಟ ಅಧಿಕಾರಿ ಎಂಬ ಹೆಸರು ಪಡೆದಿರುವೆ. ನಿನ್ನನ್ನು ಬ್ರಹ್ಮ ಬಂದರೂ ನಾನು ಬಿಡುವುದಿಲ್ಲ. ಭ್ರಷ್ಟಾಚಾರದಿಂದ ಸಂಪಾದಿಸಿದ ಹಣ ನಿನ್ನ ಮಕ್ಕಳಿಗೂ ತಲುಪಲ್ಲ. ನಿನ್ನ ಪಾಪದ ಕೊಡ ನೀನೇ ಹೊರಬೇಕು. ಇಂದೇ ಬಿಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡು ಎಂದು ಎಸಿ ಪ್ರಮೋದ್‌ಗೆ ವಾರ್ನಿಂಗ್ ಮಾಡಿದರು. ವರ್ಷಕ್ಕೆ ಸಂಡೂರಿನಿಂದ 7800 ಕೋಟಿ ರೂ. ತೆರಿಗೆ ಪಾವತಿಯಾಗುತ್ತಿದ್ದು, ಎಲ್ಲ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಋಣ ತೀರಿಸಿ, ಇಲ್ಲದಿದ್ದರೆ ಕುಮಾರಸ್ವಾಮಿ ದೇವರು ಯಾರನ್ನು ಕ್ಷಮಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸಂಸದರು ಎಚ್ಚರಿಸಿದರು.
ಸಮುದಾಯ ಕೇಂದ್ರ ನಿರ್ಮಿಸಿ : ಇಲ್ಲಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿಯರು ಹಾಗೂ ಮಹಿಳೆಯರು ಋತುಮತಿಯಾದ ವೇಳೆ ಊರಿನಿಂದ ಆಚೆ ವಾಸಿಸುತ್ತಿದ್ದಾರೆ. ಆದ್ದರಿಂದ, ಅವರ ಮೂಲ ಸೌಕರ್ಯಕ್ಕಾಗಿ ಸಮುದಾಯ ಕೇಂದ್ರ ನಿರ್ಮಿಸಿ ಅನುಕೂಲ ಕಲ್ಪಿಸಿ ಎಂದು ಶಾಸಕಿ ಈ.ಅನ್ನಪೂರ್ಣ ಡಿಸಿಗೆ ಮನವಿ ಮಾಡಿದರು. ತಾಲೂಕಿನಲ್ಲಿ ಅಕ್ರಮ ಸೇಂದಿ ಮಾರಾಟವಾಗುತ್ತಿದ್ದು ನಾನು ನೇರವಾಗಿ ಮಾರಾಟಗಾರರಿಗೆ ಎಚ್ಚರಿಸಲು ತೆರಳಿದ ವೇಳೆ ನನಗೆ ಎರಡು ಸೇಂದಿ ಬಾಟಲಿ ಕೊಟ್ಟರು ಎಂದು ಶಾಸಕಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಬಾಕ್ಸ್ : ದಿಶಾ ಸಭೆಗೆ ಹಾಜರಾಗದ ಬಿಎಸ್‌ಎನ್‌ಎಲ್, ರೈಲ್ವೆ ಇಲಾಖೆ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಎಂದು ಸೂಚಿಸಿದರು. ಅಲ್ಲದೆ, ಎಪಿಎಂಸಿ ಕಾರ್ಯದರ್ಶಿ ಸಭೆಗೆ ಹಾಜರಾಗದೆ ಇಲಾಖೆಯ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿರುವುದು ಕಂಡ ಸಂಸದರು ಆ ಅಧಿಕಾರಿಯನ್ನು ಸಭೆಯಿಂದ ಹೊರ ನಡಿ ಸಭೆ ಮುಗಿಯುವ ವೇಳೆಗೆ ಕಾರ್ಯದರ್ಶಿ ಸಭೆಗೆ ಹಾಜರಾಗಿರಬೇಕು ಎಂದು ಅಕ್ರೋಶಗೊಂಡರು. ಕೃಷಿ, ತೋಟಗಾರಿಕೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಹಾರ ಇಲಾಖೆಯ ಉಪನಿರ್ದೇಶಕಿ ಸಕೀನ ಅವರನ್ನು ನೀವು ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಿತರಣೆ ತಡೆಯಲು ರಾಣಿ ಚೆನ್ನಮ್ಮ, ಒನಕೆ ಒಬವ್ವನಂತೆ ಹೋರಾಟ ನಡೆಸಿ ಎಂದು ಹೇಳಿದರು. ಯಾವುದೆ ಒಂದು ಯೋಜನೆಯ ಅನುದಾನಕ್ಕೆ ಕೆಎಂಆರ್‌ಸಿಯಿಂದ ಅನುಮೋದನೆ ದೊರತೆ ಬಳಿಕ ಡಿಎಂಎಫ್ ಅನುದಾನ ಸದ್ಬಳಕೆ ಅನುಮತಿಲ್ಲ ಎಂದು ಡಿಸಿ ತಿಳಿಸಿದರು. ಬಳಿಕ ಸಂಸದರು ಕೆಎಂಆರ್‌ಸಿ ಮುಖ್ಯಸ್ಥ ನ್ಯಾ. ಸುದರ್ಶನರೆಡ್ಡಿ ಜತೆ ನಾನು ಚರ್ಚಿಸುವೆ ಎಂದರು.