ಬಳ್ಳಾರಿ ; ಬಡತನ, ಪೋಷಕರ ನಿರ್ಲಕ್ಷೃದ ಕಾರಣ ದೇಶದಲ್ಲಿ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಅ ಪದ್ಧತಿ ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಜಿಲ್ಲಾ ವಕೀಲರ ಸಂಘ, ವಿವಿಧ ಇಲಾಖೆಗಳು ಮತ್ತು ಇತರೆ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧಿಸಲಾಗಿದ್ದು, ಇಂದಿಗೂ ಬಡತನವೆನ್ನುವುದು ಅನೇಕ ಮಕ್ಕಳನ್ನು ದುಡಿಯುವಂತೆ ಮಾಡುತ್ತಿದೆ. ಆದ್ದರಿಂದ, ಇದನ್ನು ಹೋಗಲಾಡಿಸಲು ಕೇವಲ ಸರ್ಕಾರದಿಂದ ಸಾಲದು. ಅಧಿಕಾರಿಗಳು, ಪೋಷಕರು, ಸಾರ್ವಜನಿಕರು ಹಾಗೂ ಇತರೆ ಸಂಘ-ಸಂಸ್ಥೆಗಳು ಒಗ್ಗೂಡಿ ಕಾರ್ಯಾಚರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ನೆರೆಹೊರೆಯ ನಿಮ್ಮ ಸ್ನೇಹಿತರು ಹಾಗೂ ಬೇರೆ ಯಾರಾದರೂ ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಕೊಂಡಿದ್ದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಪ್ರಗತಿ ಸ್ಪಷ್ಟವಾಗಿದ್ದು, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ. ಪ್ರಯತ್ನಗಳನ್ನು ವೇಗಗೊಳಿಸೋಣ ಎಂಬ ಈ ವರ್ಷದ ಘೋಷವಾಕ್ಯದಂತೆ ರಾಷ್ಟ ಕಟ್ಟುವಲ್ಲಿ ಮಕ್ಕಳ ಪಾತ್ರ ಪ್ರಮುಖವಾಗಿದೆ. ಅಂತಹ ಮಕ್ಕಳು ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿಸಿಕೊಂಡು ಶಿಕ್ಷಣದಿಂದ ವಂಚಿತರಾಗಿದ್ದಲ್ಲಿ ಕಾರ್ಮಿಕ, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಎಎಸ್ಪಿ ನವೀನ್‌ಕುಮಾರ ಮಾತನಾಡಿ, ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ. ತಮ್ಮ ಸುತ್ತ-ಮುತ್ತಲಿನಲ್ಲಿ ದುಡಿಯುವ ಮಕ್ಕಳು, ಕಿಶೋರರು ಕಂಡುಬಣದಲ್ಲಿ ಸಹಾಯವಾಣಿ ಸಂಖ್ಯೆ 1098 ಅಥವಾ 112 ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು. ಬಳಿಕ ವಿರೋಧಿ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಭೋದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾವು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ್ದು ವಿಶೇಷವಾಗಿತ್ತು.