ಬಳ್ಳಾರಿ ; ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ಜನರಿಗೆ ನಿಗದಿಗಿಂತ ಮುನ್ನವೇ ಅಧಿಕಾರಿಗಳು ವಿತರಿಸಬೇಕು ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.
ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ತಾಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಸೋಮವಾರ ಹಮ್ಮಿಕೊಂಡಿದ್ದ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆಯಾ ಇಲಾಖೆಯ ಅಧಿಕಾರಿಗಳು ಅಗತ್ಯವಿರುವ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಸರ್ಕಾರದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಅನುದಾನ ಲಭ್ಯವಿದೆ. ಸರ್ಕಾರ ಅನುದಾನ ಬಿಡುಗಡೆವರೆಗೆ ಅಧಿಕಾರಿಗಳು ಕಾಯುವುದು ಬೇಡ. ನಿಮ್ಮ ಇಲಾಖೆಗಳಿಗೆ ಏನು ಬೇಕು ಅದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ನಿರ್ದೇಶಿಸಿದರು. ಜನರ ಮತ್ತು ಅಧಿಕಾರಿಗಳ ಮಧ್ಯೆ ಸೇತುವೆಯಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದಿಂದ ಅಧಿಕಾರಿಗಳಿಗೆ ನೂರಕ್ಕೆ ನೂರರಷ್ಟು ಬೆಂಬಲ ನೀಡುತ್ತಿದೆ. ಸರ್ಕಾರವೇ ಜನ ಸಾಮಾನ್ಯರ ಬಳಿ ತೆಗೆದುಕೊಂಡು ಹೋಗುವ ಕೆಲಸ ಜನಪ್ರತಿನಿಧಿಗಳಾದ ನಾವು ಮಾಡುತ್ತೇವೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜತೆಗೂಡಿ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸುವಂತೆ ಜಾಗೃತಿ ನೀಡಬೇಕು. ಈವರೆಗೆ ಶೇ. 1 ರಷ್ಟು ಸಹ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿಲ್ಲ. ಬೆಳೆ ಹಾನಿಯಾದಾಗ ವಿಮೆಯು ರೈತರನ್ನು ಕೈ ಹಿಡಿಯುತ್ತದೆ. ಹಾಗಾಗಿ ಆಯಾ ಪಿಡಿಒ ಗಳ ಸಹಕಾರದೊಂದಿಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ರೈತರಿಗೆ ಮನವರಿಕೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿರಿಸಲು ಅಧಿಕಾರಿಗಳು ಸಾಕಷ್ಟು ಶ್ರಮವಹಿಸಬೇಕಿದೆ. ಅಗತ್ಯಕ್ಕೆ ತಕ್ಕಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ನಗರ ಮತ್ತು ಗ್ರಾಮೀಣಕ್ಕೆ ಪ್ರತ್ಯೇಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದರು.
ತಾಲೂಕು ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಪೂರ್ಣಗೊಳಿಸಬೇಕು. ಜನರಿಗೆ ಕುಡಿವ ನೀರಿಗೆ ಸಮಸ್ಯೆಯಾಗಬಾರದು. ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಈ ಕುರಿತಾಗಿಯೇ ಸಾಕಷ್ಟು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ವಿವಿಧ ಅನುದಾನದಡಿ ಜಿಲ್ಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.
ಸಭೆಗೂ ಮುನ್ನ ಗ್ಯಾರಂಟಿ ಯೋಜನೆಯ ಯುವನಿಧಿಯ ಮೂರನೇ ವರ್ಷದ ನೋಂದಣಿ ಪ್ರಕ್ರಿಯೆ ಮಾಹಿತಿ ಕುರಿತ ಭಿತ್ತಿಚಿತ್ರ ಮತ್ತು ಡಿಎಪಿ ರಸಗೊಬ್ಬರ ಬಳಕೆ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವ ಕುರಿತ ಮಾಹಿತಿ ಭಿತ್ತಿಚಿತ್ರ ಅನಾವರಣಗೊಳಿಸಲಾಯಿತು.