ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಿ

Published on

ಬಳ್ಳಾರಿ : ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಭತ್ತ ನೆಲಕ್ಕೆ ಉರುಳಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ, ಸರ್ಕಾರ ಕೂಡಲೇ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಒತ್ತಾಯಿಸಿದರು.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ಎಕರೆಗೆ ಅಂದಾಜು 7 ಕ್ವಿಂಟಲ್‌ನಷ್ಟು ನಷ್ಟವಾಗಿದೆ. ಸರ್ಕಾರ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು. ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ತುಂಗದ್ರ ಅಚ್ಚುಕಟ್ಟು ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 4.5 ಲಕ್ಷ ಹೆಕ್ಟೇರ್ ಪ್ರದೇಶದ ಗದ್ದೆಗಳಲ್ಲಿ 35 ಲಕ್ಷ ಮೆಟ್ರಿಕ್‌ಟನ್‌ನಷ್ಟು ತ್ತ ಬೆಳೆಯುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಟ 30 ಗರಿಷ್ಟ 35 ಕ್ವಿಂಟಲ್ ಇಳುವರಿ ಬರುತ್ತಿರುತ್ತದೆ. ಅಕಾಲಿಕ ಮಳೆಯಿಂದ ಪ್ರತಿ ಎಕರೆಗೆ ಅಂದಾಜು 7 ಕ್ವಿಂಟಲ್ ತ್ತ ನಷ್ಟವಾಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನಾಲ್ಕು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ಭತ್ತದ ಪೈರಿನ ಪ್ರಮಾಣವನ್ನು ಅಂದಾಜಿಸಲು ಸರ್ಕಾರ ಸಮೀಕ್ಷೆ ಕೈಗೆತ್ತಿಕೊಳ್ಳಬೇಕು. ನಷ್ಟದ ಸಮೀಕ್ಷೆ ಕೈಗೊಂಡ ನಂತರ ನಷ್ಟಕ್ಕೊಳಗಾದ ರೈತನಿಗೆ ಪ್ರತಿಕ್ವಿಂಟಲ್‌ಗೆ 2300 ರೂ. ರಂತೆ ನಷ್ಟದ ಪರಿಹಾರದ ಮೊತ್ತವನ್ನು ಪಾವತಿಸುವುದರ ಮೂಲಕ ರೈತರ ನೆರವಿಗೆ ನಿಲ್ಲಬೇಕು. ಈಗಾಗಲೇ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳು ಸೇರಿದಂತೆ ವಿಜಯನಗರ ಜಿಲ್ಲೆಗಳ ರೈತರು ಭತ್ತವನ್ನು ಕಟಾವು ಮಾಡಿ ಒಕ್ಕಣಿ ಮಾಡುವ ಕೆಲಸವು ನಡೆಯುತ್ತಿದೆ. ಖರೀದಿ ಕೇಂದ್ರಗಳನ್ನು ಡಿ. 1 ರಿಂದ ಈ ನಾಲ್ಕೂ ಜಿಲ್ಲೆಗಳಲ್ಲಿ ಆರಂಭಿಸಬೇಕು ಎಂದರು. ಪ್ರಮುಖರಾದ ಲೇಪಾಕ್ಷಿಅಸುಂಡಿ, ಪಂಪನಗೌಡ, ಬಸವರಾಜಸ್ವಾಮಿ, ಉಮಾಪತಿಗೌಡ, ವಿಶ್ವನಾಥ್, ತಿಮ್ಮಾರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net