ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಿ

Published on

ಬಳ್ಳಾರಿ : ಇತ್ತೀಚೆಗೆ ಜಿಲ್ಲೆಯ ಮದಿರೆ ಕ್ರಾಸ್ ಬಳಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿ ಮೃತಪಟ್ಟ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಹೇಳಿದರು.

ಇಲ್ಲಿನ ಜೆಡಿಎಸ್ ಪಕ್ಷದ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ನಿರಂತರವಾಗಿ ಪಡಿತರ ಅಕ್ಕಿ ದಂಧೆ ನಡೆಸಲಾಗುತ್ತಿದೆ. ಈ ವಿಚಾರವಾಗಿ ಕುಂಟು ಮಂಜ ಎಂಬುವವರ ಕೊಲೆ ಆಗಿದೆ ಎಂದು ಆರೋಪಿಸಿದರು. ಕೆಲ ದಿನಗಳ ಹಿಂದೆ ನಗರದ ಶರಬಯ್ಯ ಎಂಬುವವರ ಮೇಲೆ ಕೊಲೆ ಪ್ರಯತ್ನ ನಡೆದಿತ್ತು. ಕುರುಗೋಡಿನ ಎರ್ರಿಸ್ವಾಮಿ, ಉಮೇಶ ಎಂಬುವವರು ಅಕ್ರಮ ಪಡಿತರ ದಂಧೆ ನಡೆಸುವವರು. ಇವರ ಮೇಲೆ ಈವರೆಗೆ ಪ್ರಕರಣ ದಾಖಲಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವದಿಂದ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ದಂಧೆ ಮಾಡುವ ಜನರ ಮೇಲೆ ಏಳೆಂಟು ಕೇಸುಗಳಾಗಿವೆ. ಆದರೂ ಅವರನ್ನೇಕೆ ರೌಡಿ ಶೀಟಿಗೆ ಸೇರಿಸಿಲ್ಲ. ಈ ಅಕ್ರಮ ದಂಧೆಗೆ ಆಹಾರ ಇಲಾಖೆಯ ಅಧಿಕಾರಿಗಳು, ಪೊಲೀಸರ ಸಹಕಾರವೂ ಇದೆ. ಕುರುಗೋಡಿನಲ್ಲಿ ಆಹಾರ ಇಲಾಖೆಯ ಇನ್ಸ್‌ಪೆಕ್ಟರ್ ಸಹಕಾರದಿಂದಲೇ ಅಕ್ರಮ ಪಡಿತರ ಸಾಗಾಟ ನಡೆಯುತ್ತಿದೆ. ಅದಕ್ಕಾಗಿ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು ಎಂದರು. ಜೆಡಿಎಸ್ ಮುಖಂಡರಾದ ಲಕ್ಷ್ಮೀಕಾಂತ ರೆಡ್ಡಿ, ವಿಜಯ್ ಕುಮಾರ ಮುರೆ, ಹೊನ್ನೂರ ಸ್ವಾಮಿ, ರಾಮಾಂಜನೇಯಲು, ಜಾವೀದ, ಹೊನ್ನೂರು ವಲಿ, ನಾಗರಾಜ್, ಚಾಗ್ನೂರು ನಾಗರಾಜ್, ಜಮೀಲಾ, ಶಬಾನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net