ಬಳ್ಳಾರಿ : ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಸೆ.29 ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ನಾನಾ ಇಲಾಖೆಯ ಅಧಿಕಾರಿಗಳ ಸಮಗ್ರ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಅನುಷ್ಠಾನಗೊಳಿಸಿದ ವಿವಿಧ ಯೋಜನೆಗಳು, ಅವುಗಳ ಪ್ರಗತಿ, ಶೇಕಡವಾರು ಗುರಿ ಸಾಧನೆ ಸೇರಿದಂತೆ ನಾನಾ ವಿಧದ ಮಾಹಿತಿಯೂ ಸಹ ಒಳಗೊಂಡಿರುವಂತೆ ಮಾಹಿತಿ ಕೈಪಿಡಿ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಮಾಹಿತಿ ಕೊರತೆಯಾಗದಂತೆ ಎಚ್ಚರವಹಿಸಿ ಎಂದು ಹೇಳಿದರು.
ಕೃಷಿಗೆ ಸಂಬಂಧಿಸಿದಂತೆ ರಸಗೊಬ್ಬರ ಪೂರೈಕೆ ಹಾಗೂ ಮೆಣಸಿನಕಾಯಿ, ಮುಸುಕಿನ ಜೋಳ, ತೊಗರಿ ಬೆಳೆ ಬೆಳೆಯಲು ಕಾರಣವೇನು, ಬೆಳೆಗಳ ವಿಮೆಗೆ ರೈತರ ನೋಂದಣಿ ಕ್ರಮ ಕುರಿತ ಮಾಹಿತಿ ಚರ್ಚೆಯಾಗಬಹುದು. ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಈವರೆಗಿನ ಮಾಹಿತಿ ನಮೂದಿಸಬೇಕು ಎಂದು ಸೂಚಿಸಿದರು.
ಹೈನುಗಾರಿಕೆಗೆ ಉತ್ತೇಜನ, ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆ ಹಾಗೂ ಹಾಲು ಉತ್ಪಾದನೆಗೆ ರೈತರಿಗೆ ನೀಡಬೇಕಾದ ಪ್ರೋತ್ಸಾಹ-ಬೆಂಬಲ ಮತ್ತು ಗುಣಮಟ್ಟದ ಹಾಲು ಸರಬರಾಜು ಹಾಗೂ ಮೆಗಾಡೈರಿ ಸ್ಥಾಪನೆಯ ಬೆಳವಣಿಗೆಯ ಕುರಿತು ಚರ್ಚಿಸುವರು ಎಂದರು.
ಆರೋಗ್ಯ ಸೌಲಭ್ಯ ವಿತರಣೆ, ಆಸ್ಪತ್ರೆಗಳ ನಿರ್ವಹಣೆ, ಔಷಧಗಳ ದಾಸ್ತಾನು ಸಂಬಂಧಿಸಿದಂತೆ ಡಿಎಚ್‌ಒ ಹಾಗೂ ಬಿಮ್ಸ್ ನಿರ್ದೇಶಕರು ಮಾಹಿತಿ ನೀಡಲು ಸಿದ್ಧರಿರಬೇಕು. ತೃತೀಯಲಿಂಗಿಗಳ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ವರದಿಯ ಪೂರಕ ಮಾಹಿತಿ ಇರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಂಕಿ-ಸಂಖ್ಯೆ ಮಂಡಿಸುವ ಬದಲು, ಯೋಜನೆ, ಸೌಲಭ್ಯ, ಕಟ್ಟಡ ನಿರ್ಮಾಣ, ಸ್ಥಳ ಬೇಡಿಕೆ, ಸಾಮಗ್ರಿ-ಸಲಕರಣೆ, ಕುಡಿವ ನೀರಿನ ವ್ಯವಸ್ಥೆ, ಎಸ್‌ಎಸ್‌ಎಲ್‌ಸಿ ಯಲ್ಲಿ ಜಿಲ್ಲೆಯ ಮುಂಚೂಣಿ, ವಸತಿ ನಿಲಯಗಳ ಸ್ಥಿತಿ, ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗಬೇಕು ಎಂದರು.