ವಾಹನ ಸಂಚಾರ ಕಲ್ಪಿಸಲು ಪ್ರತಿಭಟನೆ

Published on

ಬಳ್ಳಾರಿ: ಇಲ್ಲಿನ ದುರ್ಗಮ್ಮ ದೇವಸ್ಥಾನದ ರೈಲ್ವೆ ಕೆಳ ಸೇತುವೆಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಸೋಮಶೇಖರ ಗೌಡ ಮಾತನಾಡಿ, ಕಾಮಗಾರಿ ಪ್ರಾರಂಭಿಸಿ 62 ದಿನ ಕಳೆದಿವೆ. ಬಳ್ಳಾರಿಯ ಜನತೆ ಜ.26ರಂದು ತೆರವು ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದರು. ಸಾರ್ವಜನಿಕರ ಸಂಚಾರಕ್ಕೆ ಈ ಕೆಳಸೇತುವೆ ಬಂದ್ ಆಗಿರುವುದರಿಂದ ಜನತೆ ನಿತ್ಯ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ. ಸತ್ಯನಾರಾಯಣ ಪೇಟೆ ರಸ್ತೆಯ ಹತ್ತಿರ, ಮೋತಿ ವೃತ್ತದ ಹತ್ತಿರ ಮೇಲ ಸೇತುವೆ ಹತ್ತಿರ ದಿನಂಪ್ರತಿ ಟ್ರಾಫಿಕ್ ಜಾಮ್ ಆಗಿ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ, ಮಹಾನಗರಪಾಲಿಕೆ ಹಾಗೂ ಸರ್ಕಾರ ಜನತೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖಂಡನೀಯ. ಆದ್ದರಿಂದ, ಈ ಕೂಡಲೇ ದುರ್ಗಮ್ಮ ಗುಡಿ ಕೆಳಸೇತುವೆಯನ್ನು ಸಂಚಾರಕ್ಕೆ ತೆರವುಗೊಳಿಸಲು ಸಮಿತಿ ಆಗ್ರಹಿಸುತ್ತದೆ. ಒಂದು ವೇಳೆ ನಿಧಾನಗತಿಯಲ್ಲಿ ಹೀಗೆ ಮುಂದುವರೆದಿದ್ದಲ್ಲಿ, ದೊಡ್ಡ ಸಂಖ್ಯೆಯಲ್ಲಿ ಬಳ್ಳಾರಿಯ ಜನತೆ ಬಂದು ಕೆಳಸೇತುವೆ ಬಳಿ ಧರಣಿ ಕುಳಿತುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಾಕ್ಸ್ : ದುರ್ಗಮ್ಮ ಗುಡಿಯ ರೈಲ್ವೆ ಕೆಳ ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನಗಳ ಸಂಚಾರಕ್ಕೆ ಬಿಡದೆ ಕಾರಣ ಸೇತುವೆಗೆ ಅಡ್ಡಗಟ್ಟಿದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ಬದಿ ತಳ್ಳಿ ವಾಹನಸವಾರರು ಕೆಲ ಕಾಲ ಸಂಚಾರಿಸಿದರು. ಬಳಿಕ ಕಾಮಗಾರಿಯ ಗುತ್ತಿಗೆದಾರರ ಕಡೆಯವರೊಬ್ಬ ಜೆಸಿಬಿ ಮೂಲಕ ಮರಳಿ ಅಡ್ಡಗಟ್ಟಿ ಸೇತುವೆ ಬಂದ್ ಮಾಡಿದರು. ಈ ವೇಳೆ ಜೆಸಿಬಿ ಚಾಲಕ ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಅಲ್ಲದೆ, ಎರಡು ಸಂಘಟನೆಗಳು ಸೇತುವೆ ಬಂದ್ ಮಾಡಿದ ಒಂದು ಬದಿಯಲ್ಲಿ ನಿಂತು ಶಾಂತಿಯುತವಾಗಿ ಪ್ರತಿಭಟನೆ ಮಾಡುವೆ ವೇಳೆ ಟ್ರಾಫಿಕ್ ಹಾಗೂ ಬ್ರೂಸ್‌ಪೇಟೆ ಠಾಣಾ ಸಿಪಿಐಗಳು ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಅನನುಕೂಲವಾಗಿದೆ ಎಂಬುದಾಗಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದರು. ಈ ವೇಳೆ ಪೊಲೀಸರಿಗೆ ಹಾಗೂ ಪ್ರತಿಭಟನಕಾರರಿಗೆ ಕೆಲ ಕಾಲ ವಾಗ್ವಾದ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net