ಬೆಂಬಲ ಬೆಲೆಗೆ ಒತ್ತಾಯಿಸಿ ಜ.30ಕ್ಕೆ ಪ್ರತಿಭಟನೆ

Published on

ಬಳ್ಳಾರಿ : ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಜ.30 ರಂದು ಎಐಕೆಕೆಎಂಎಸ್ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಗೋವಿಂದ್ ಹೇಳಿದರು.

ಇಲ್ಲಿನ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆ ಎಂಬುದಾದರೆ ಸಹ ಅದು ಆಹಾರ ಪದಾರ್ಥಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ಮೆಣಸಿನಕಾಯಿ ಬೆಳೆಯು ಸಹ ಅಗತ್ಯವಾದದ್ದು ಎಂದು ಪರಿಗಣಿಸಿ, ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಮೆಣಸಿನಕಾಯಿ ಬೆಳೆಯನ್ನು ಸರ್ಕಾರವೇ ಖರೀದಿಸಬೇಕು. ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರ ಮೆಣಸಿನಕಾಯಿ ಬೆಳೆಗೆ ಬೆಂಬಲ ನೀಡಿ, ರೈತರಿಗೆ ನ್ಯಾಯ ಒದಗಿಸಬೇಕು. ಮೆಣಸಿನಕಾಯಿ ಬೆಳೆಯ ತಳಿಗಳಾದ 5531ಗೆ 25 ಸಾವಿರ ರೂ., ಬ್ಯಾಡಗಿಗೆ 50 ಸಾವಿರ ರೂ. ಬೆಲೆ ನಿಗದಿ ಮಾಡಬೇಕು. ಅಲ್ಲದೆ, ಶೀಘ್ರದಲ್ಲೇ ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಮಾಡಬೇಕು. ಮೆಣಸಿನಕಾಯಿ ಬೆಳೆಗೆ ತಗುಲುತ್ತಿರುವ ಕಪ್ಪು ಮಚ್ಚೆ ರೋಗಕ್ಕೆ ಔಷಧ ಕಂಡುಹಿಡಿಯಬೇಕು. ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆಯನ್ನು ನಿಯಂತ್ರಿಸಬೇಕು. ಸರ್ಕಾರವೇ ಔಷಧಗಳ ವಿತರಣಾ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಮೆಣಸಿಕಾಯಿ ಬೆಳೆಯು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶ್ವಸಿಗೊಳಿಸಬೇಕು ಎಂದು ಕರೆ ನೀಡಿದರು. ಕಾರ್ಯದರ್ಶಿ ಗುರಳ್ಳಿ ರಾಜ, ಉಪಾಧ್ಯಕ್ಷ ಬಸಣ್ಣ, ಸದಸ್ಯರಾದ ಹೊನ್ನುರಪ್ಪ, ಧನರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net