ಬಳ್ಳಾರಿ ; ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿದ್ದ ಎಸ್‌ಸಿಪಿ, ಟಿಎಸ್ಪಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬುದಾಗಿ ವಿರೋಧಿಸಿ ಇಲ್ಲಿನ ದುರ್ಗಮ್ಮ ದೇವಸ್ಥಾನದಿಂದ ಗಡಗಿ ಚೆನ್ನಪ್ಪ ವೃತ್ತದವರೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಘಟಕವು ಮೆರವಣಿಗೆ ನಡೆಸಿ ಶುಕ್ರವಾರ ಪ್ರತಿಭಟಿಸಲಾಯಿತು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಕನ್ನ ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಜನರಿಗಾಗಿ ಗ್ಯಾರಂಟಿ ಯೋಜನೆಗಳು ನೀಡಿರುವುದು ತಪ್ಪಿಲ್ಲ. ಆರಂಭದಲ್ಲೇ ಎಲ್ಲರಿಗೂ ಉಚಿತ ನೀಡುವುದಾಗಿ ಭರವಸೆ ನೀಡಿ ಈಗ ದಲಿತರ ಅನುದಾನದಿಂದ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ದಲಿತರನ್ನು ತುಳಿದು ಆಡಳಿತ ನಡೆಸುತ್ತಿದೆ. ಎಸ್‌ಸಿಪಿ ಹಾಗೂ ಟಿಎಸ್ಪಿ ಕೇವಲ ದಲಿತರ ಏಳಿಗೆಗಾಗಿ ಬಳಕೆಯಾಗಬೇಕು ಎಂಬುದು ಬಿಜೆಪಿಯ ಉದ್ದೇಶ. ಈಗಾಗಲೇ ಎರಡು ವರ್ಷದಲ್ಲಿ 22 ಸಾವಿರ ಕೋಟಿ ರೂ. ಅನುದಾನ ಗ್ಯಾರಂಟಿಗಾಗಿ ಬಳಕೆಯಾಗಿದೆ. ಅಲ್ಲದೆ, ಮುಂಬರುವ ಮಂಡಿಸಲಿರುವ ಬಜೆಟ್ ನಲ್ಲಿ 15 ಸಾವಿರ ಕೋಟಿ ರೂ. ಬಳಸಲು ಉದ್ದೇಶಿಸಿದ್ದಾರೆ ಎಂದು ಕಿಡಿಕಾರಿದರು.
7ಸಿ ಕಾಯ್ದೆಯಡಿ ಆಯಾ ಜನಾಂಗದವರಿಗೆ ಮೀಸಲಾದ ಹಣ ಅದೇ ಜನಾಂಗದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಅದು ಬಿಟ್ಟು ಅನುದಾನ ಬೇರೆ ಕಡೆ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ 7ಸಿ ಕಾಯ್ದೆಯನ್ನು ರದ್ದಗೊಳಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ಪಂಚ ಗ್ಯಾರೆಂಟಿಗಳನ್ನು ಘೋಷಣೆ ಮಾಡಿದಾಗ ಅದಕ್ಕೆ ಎಸ್‌ಸಿ ಹಾಗೂ ಎಸ್ಟಿ ಹಣ ಬಳಕೆ ಮಾಡುವುದಾಗಿ ಹೇಳಿಲ್ಲ. ಈಗ ಅದಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಎಸ್‌ಸಿಪಿ ಮತ್ತು ಟಿಎಸ್ಪಿ ಅನುದಾನ ಬೇರೆ ಕಾರ್ಯಕ್ರಮಗಳಿಗೆ ವರ್ಗಾವಣೆ ಆಗಬಾರದು ಎಂದು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರಹಾಕಿದರು. ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.